ಜಿಲ್ಲೆಯಾಗುತ್ತಿರುವುದು ರಾಷ್ಟ್ರಕ್ಕೆ ಖುಷಿ ತಂದಿದೆ ಸಚಿವ ಆನಂದ್ ಸಿಂಗ್

Editorial State

ಜಿಲ್ಲೆಯಾಗುತ್ತಿರುವುದು ರಾಷ್ಟ್ರಕ್ಕೆ ಖುಷಿ ತಂದಿದೆ
ಸಚಿವ ಆನಂದ್ ಸಿಂಗ್ ಹೇಳಿಕೆ
ಜಿಲ್ಲಾ ಉದ್ಘಾಟನೆಗೆ ಗವಿಶ್ರೀಗೆ ಆಹ್ವಾನ

ವಿಜಯನಗರ: ವಿಜಯನಗರ ಜಿಲ್ಲೆಯಾಗುತ್ತಿರುವುದು ವೈಯಕ್ತಿಕವಾಗಿ ನನಗಿಂತ ರಾಜ್ಯ, ರಾಷ್ಟ್ರಕ್ಕೆ ಖುಷಿ ತಂದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ಕೊಪ್ಪಳ ನಗರದ ಗವಿಮಠದಲ್ಲಿ ವಿಜಯನಗರ ಜಿಲ್ಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಗವಿಶ್ರೀಗಳಿಗೆ ಶುಕ್ರವಾರ ಆಹ್ವಾನ ನೀಡಿ ಮಾತನಾಡಿದರು.
ವಿಜಯನಗರ ಪ್ರಪಂಚದಲ್ಲೇ ಎರಡನೇ ಶ್ರೀಮಂತ ಸಾಮ್ರಾಜ್ಯವಾಗಿತ್ತು. ಬಹಳ ಹಿಂದೆಯೇ ಜಿಲ್ಲೆಯಾಗಬೇಕಿತ್ತು. ನನ್ನ ಅವಧಿಯಲ್ಲಿ ಆಗುತ್ತಿರುವುದು ಹರ್ಷ ತಂದಿದೆ. ಮಾಜಿ ಸಿಎಂ ಬಿಎಸ್ ವೈ ಜಿಲ್ಲೆ ಮಾಡುವುದಾಗಿ ಮಾತು ಕೊಟ್ಟಿದ್ದರು. ಅದರಂತೆ ಮಾಡಿದ್ದಾರೆ. ಅವರು, ಸಿಎಂ ಬೊಮ್ಮಾಯಿ ಹಾಗೂ ಸಂಪುಟದ ಹಲವು ಸಚಿವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಕೊಪ್ಪಳ‌ ಜಿಲ್ಲೆ ಅಭಿವೃದ್ಧಿ ತಡವಾಗಿದೆ. ಹೀಗಾಗಿ ಇಲ್ಲಿ ಮಾಡಿದ ತಪ್ಪನ್ನು ಹೊಸಪೇಟೆಯಲ್ಲಿ ಮಾಡುವುದಿಲ್ಲ ಎಂದರು.

ಬರುವ ಜನೆವರಿ ಒಳಗೆ ನಮ್ಮ ಪಶ್ಚಿಮ ತಾಲೂಕು ಜನರು ತಮ್ಮ ಎಲ್ಲಾ ಕೆಲಸಗಳಿಗೆ ಹೊಸಪೇಟೆಗೆ ಬರಬೇಕು. ಒಂದು ತಿಂಗಳಲ್ಲಿ ಎಲ್ಲಾ ಅಧಿಕಾರಿಗಳ ನೇಮಕಾತಿ ನಡೆಯಲಿದೆ. ಅಭಿವೃದ್ಧಿ ದೃಷ್ಟಿಯಿಂದ ಮಹಾನಗರ ಪಾಲಿಕೆ ಮಾಡಲು ತಯಾರಿ ನಡೆಸಿದ್ದೇವೆ. ಈಗಲೇ ಮಾಡಬೇಕೆಂದಿಲ್ಲ. ಮುಂದಾದರೂ ಮಾಡಬೇಕು ಎಂದರು.

ಅಂಜನಾದ್ರಿ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ರೋಪ್ ವೇ ಹಾಕುವ ಬೇಡಿಕೆ ಇದೆ. ಈ ಬಗ್ಗೆ ಮಾಹಿತಿ ಪಡೆದು, ಪ್ರವಾಸಿಗರ ಆದ್ಯತೆ ಅನುಸಾರ ಅಭಿವೃದ್ಧಿ ಮಾಡಲಾಗುವುದು. ಆನೆಗೊಂದಿ, ಕಮಲಾಪುರ ಭಾಗಗಳಲ್ಲಿ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಅಕ್ರಮದ ಹೆಸರಿನಲ್ಲಿ ಜನರಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು

ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಅದರಲ್ಲಿ ಕೆಲವೊಂದು ವಿನಾಯತಿ ನೀಡಲು ತಿಳಿಸಿರುವೆ. ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಂಪಿಯಲ್ಲಿಯೇ ಕೇಂದ್ರ ಪ್ರವಾಸೋದ್ಯಮ ಸಚಿವರು, ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಚಿತ್ರೋದ್ಯಮದವರನ್ನು ಕರೆದು ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಬಿಜೆಪಿ ಮುಖಂಡ ಅಮರೇಶ್ ಕರಡಿ, ಮಧುರಾ ಕರಣಂ, ಸುನೀಲ್ ಹೆಸರೂರ, ರವಿಚಂದ್ರ, ಪುಟ್ಟರಾಜ, ಗವಿಸಿದ್ದಪ್ಪ ಸೇರಿ ಹಲವರು ಇದ್ದರು.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ. 9480472030

Leave a Reply

Your email address will not be published. Required fields are marked *