Suddivaani crime team ಬೆಂಗಳೂರು.ಮೇ15: ಕ್ಯಾನ್ಸರ್ನಿಂದ ಬಳಲುತ್ತಿರುವ ಮಾಜಿ ಭೂಗತ ಪಾತಕಿ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ( ಎನ್. ಮುತ್ತಪ್ಪ ರೈ ದೇರ್ಲ) ಅವರು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಬೆಳಗಿನ ಜಾವ ಒಂದು ಗಂಟೆ ಐವತ್ತೈದು ನಿಮಿಷಕ್ಕೆ ಅವರು ಅಪಾರ ಅಭಿಮಾನಿಗಳನ್ನು ಶಿಷ್ಯರನ್ನು, ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಈ ಮೂಲಕ ಅಂಡರ್ ವರ್ಲ್ಡ್ ಡಾನ್ ತಮ್ಮ ಪ್ರೀತಿಯ ” ಗನ್ ” ಕೆಳಗಿಳಿಸಿದ್ದಾರೆ. ” ಜಯ ಕರ್ನಾಟಕದ ಧ್ವಜ” ವನ್ನು ಹಸ್ತಂತರಿಸಿದ್ದಾರೆ. ಸಾವಿರಾರು ಕೋಟಿ ಒಡೆಯನ ಬಿಡದಿಯ ವಿಶಾಲವಾದ ಮನೆ ಇನ್ನು ಖಾಲಿ ಖಾಲಿ ಖಾಲಿ…..!
ಎರಡು ವರ್ಷದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ತೀವ್ರವಾಗಿ ವಿಷಮಗೊಂಡಿತ್ತು, ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಆದರೂ ಈ ಬಗ್ಗೆ ಎರಡು ದಿನಗಳಿಂದ ಅವರಿಗೆ ಸಾವು ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿಗಳು ಹರಿದಾಡಿದವು. ಇದೀಗ ಅದು ನಿಜವಾಗಿದ್ದು, ಜಯಕರ್ನಾಟಕ ಸಂಘಟನೆಯ ರಾಜ್ಯಾದ್ಯಕ್ಷ ಡಾ.ಬಿ.ಎನ್.ಜಗದೀಶ್ ಅವರು ಮುತ್ತಪ್ಪ ರೈ ನಿಧನಕ್ಕೆ ಅಪಾರ ಕಂಬನಿ ಮಿಡಿದಿದ್ದಾರೆ.
ಭೂಗತ ಲೋಕವನ್ನು ತೊರೆದು ಹಲವು ವರ್ಷಗಳಿಂದ ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2013ರಲ್ಲಿ ಇವರ ಪತ್ನಿ ರೇಖಾ ರೈ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2018ರಲ್ಲಿ ಇವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ನಂತರ ಸುದ್ದಿಗೋಷ್ಠಿ ಕರೆದು ಸ್ವತಃ ಅವರೇ ಕ್ಯಾನ್ಸರ್ ಬಗ್ಗೆ ಹೇಳಿಕೊಂಡಿದ್ದರು.
ಒಂದು ಕಾಲದಲ್ಲಿ ಭೂಗತ ಜಗತ್ತನ್ನು ಆಳಿ ದೂರ ಸರಿದಿದ್ದ ಮುತ್ತಪ್ಪ ರೈ ಕ್ಯಾನ್ಸರ್ಗೆ ತುತ್ತಾಗಿದ್ದು, ಜೀವನ್ಮರಣದ ಹೋರಾಟ ನಡೆಸಿದ ಪರಿ ಮಾತ್ರ ಘೋರ. ಪಾತಕ ಲೋಕದ ನಂಟು ದೂರ ಮಾಡಿಕೊಂಡ ಬಳಿಕ ಜಯ ಕರ್ನಾಟಕ ಸಂಘ ಸ್ಥಾಪನೆ ಮಾಡಿದ ಇವರು ಸಾವಿರಾರು ಕೋಟಿ ಒಡೆಯರು. ವರ್ಷಕ್ಕೆ 25 ರಿಂದ 30 ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. ಎಷ್ಟು ದಿನ ಬದುಕುತ್ತೇನೊ ಎಂಬ ದಿನಗಳ ಲೆಕ್ಕ ಹಾಕುತ್ತಿದ್ದ ರೈ ವಿರುದ್ಧ ಈಗ ಅವರ ಆಪ್ತರೇ ಫೆಬ್ರವರಿ ತಿಂಗಳಲ್ಲಿ ಸಿಸಿಬಿಗೆ ದೂರು ನೀಡಿದ್ದರು. ರೈ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದರು.
ಮುತ್ತಪ್ಪ ರೈ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಅವರ ಆಸ್ತಿ ಮೇಲೆ ಬೆಂಬಲಿಗರ ಕಣ್ಣು ಬಿದ್ದಿದೆ. ಅನಾರೋಗ್ಯಕ್ಕೆ ತುತ್ತಾದರೂ ಅವರು ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರ ಆಪ್ತ ರಾಕೇಶ್ ಮಲ್ಲಿ ದೂರು ನೀಡಿದ್ದರು. ಈ ಹಿಂದೆ ಬಂಟ್ವಾಳದಲ್ಲಿ ನಾನು ಹಾಗೂ ಮುತ್ತಪ್ಪ ರೈ ಜಂಟಿಯಾಗಿ ಜಾಗ ಖರೀದಿ ಮಾಡಿದ್ದೆವು. ಈ 17 ಎಕರೆ ಜಾಗವನ್ನು ಮುತ್ತಪ್ಪ ರೈ ತನ್ನ ಸೋದರನ ಹೆಸರಿಗೆ ಖಾತೆ ಮಾಡಿಸಿದ್ದರು. ಈಗ ಇದನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಜಾಗದ ಹಣ ಕೊಡಲು ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಕೇಶ್ ಆಪಾದಿಸಿದ್ದರು.
ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತಿದ್ದಂತೆ ಮುತ್ತಪ್ಪ ರೈ ತಮ್ಮ ಕೋಟ್ಯಂತರ ರೂ ಆಸ್ತಿಯನ್ನು ತಮ್ಮ ಕುಟುಂಬದವರು ಹಾಗೂ ಕೆಲ ಬೆಂಬಲಿಗರಿಗೆ ವಿಲ್ ಬರೆದಿಟ್ಟಿದ್ದಾರೆ. ತಮ್ಮ ಕೆಲವು ಬೆಂಬಲಿಗರಿಗೆ ಆಸ್ತಿ ಬರೆದಿರುವ ಅವರು, ಹಲವು ವರ್ಷಗಳಿಂದ ಜತೆಗಿದ್ದವರಿಗೆ ನೀಡಿಲ್ಲವೆನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಹಲವರು ಅವರ ಮೇಲೆ ಸಿಟ್ಟಾಗಿದ್ದು, ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ತುಳು ಸಿನಿಮಾಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು. ದಸರಾ ಆಯುಧ ಪೂಜೆಯಲ್ಲಿ ವಾಹನಗಳ ಬದಲಿಗೆ ತಮ್ಮ ಹತ್ತಾರು ಬಗೆಯ ಗನ್ ಗಳ ಪೂಜೆ ಮಾಡಿ ಸುದ್ದಿಯಾಗಿದ್ದರು.
ನಾಡಿನ ಹಲವು ಭಾಗಗಳಲ್ಲಿ ತಮ್ಮದೇ ಬಳಗವೊಂದಿದ್ದ ರೈ ಅಭಿಮಾನಿಗಳು ಇಂದು “ಅಣ್ಣನ” ನಿಧನಕ್ಕೆ ಬನಿ ಮಿಡಿದಿದ್ದಾರೆ.
.