ತಾರಾ…. ಹಸೀನಾದಿಂದ ಹೆಬ್ಬಟ್ಟು ರಾಮಕ್ಕ ತನಕ….

Bangalore Culture and Entertainment Film World

http://www.suddivaani.com

ತಾರಾಗೆ ತಾರನೇ ಸಾಟಿ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ ಪ್ರತಿಭಾನ್ವಿತ ಕಲಾವಿದೆ. ಯಾವುದೇ ಪಾತ್ರಕ್ಕೂ ಸೈ ಎನ್ನುವ ತಾರಾ ಇತ್ತೀಚೆಗೆ ನಮ್ಮ ಸಾಲಗಾಮೆ ನಂಜುಂಡೇಗೌಡರು ನಿರ್ದೇಶನ ಮಾಡಿದ ಹೆಬ್ಬಟ್ಟು ರಾಮಕ್ಕ ಸಿನಿಮಾದಲ್ಲಿ ಅದ್ಭುತ ಅಭಿನಯ ನೀಡಿ, ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಎಂಬತ್ತರ ದಶಕದಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿದ ತಾರಾ ಅಭಿನಯಿಸಿದ ಚಿತ್ರಗಳು ಸಾಕಷ್ಟಿವೆ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ ಸಿನಿಮಾ ಮಾಡಿದಾಗ ಅದರಲ್ಲೂ ಹೆಗ್ಗಡತಿ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ತಾರಾ, ನೆರೆ ಭಾಷೆಗಳ ಚಿತ್ರಗಳಲ್ಲಿಯೂ ಅಭಿನಯಿಸಿ ಬಂದವರು.

ಲೇಖಕಿ ಭಾನು ಮುಷ್ತಾಕ್ ಅವರ ಹಸೀನಾ ಕಾದಂಬರಿ ಸಿನಿಮಾ ಮಾಡಿದ ಗಿರೀಶ್ ಕಾಸರವಳ್ಳಿ ಪ್ರಯತ್ನ ಅಭಿನಂದನಾರ್ಹ. ಆ ಸಿನಿಮಾ ನಾಯಕಿ ಹಸೀನಾ ಪಾತ್ರಧಾರಿ ತಾರಾ ಅಭಿನಯಕ್ಕೂ ಆಗ ರಾಷ್ಟ್ರ ಪ್ರಶಸ್ತಿ ತಾರಾಗೆ ಬಂದಿತ್ತು. ನಾನಾಗ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ. ಹಾಸನದ ಕಲಾಭವನದಲ್ಲಿ ಅದ್ದೂರಿ ಸಮಾರಂಭ ಮಾಡಿ‌ ತಾರಾ ಅವರನ್ನು ಅಭಿನಂದಿಸಿದ್ದೆವು. ಆ ಸವಿ ಘಳಿಗೆಯನ್ನು ಅವರು ಮರೆತಿಲ್ಲ, ನಮ್ಮ ಬಳಗಕ್ಕೂ ಈಗಲೂ ಮರೆಯಲಾಗದ ವರ್ಣರಂಜಿತ ಸಮಾರಂಭ.

ಅಂದಿನಿಂದ ಈ ತನಕ ತಾರಾ ಅವರು ಸವೆಸಿದ ಕಲ್ಲು ಮುಳ್ಳಿನ ಹಾದಿಯೇ ಆಕೆಯ ಪ್ರತಿಭೆಗೊಂದು ಸ್ಥಾನ ನೀಡಿದೆ ಅಂದರೂ ತಪ್ಪಲ್ಲ.
ತನ್ನ ಸೌಮ್ಯ ನಡೆತೆಯಲ್ಲಿ ಎಲ್ಲರ ಮನ ಕರಗಿಸುವ ಭಾವಕತೆ ಆಕೆಗೆ ಸಿದ್ದಿಸಿದೆ. ಸಿನಿಮಾ, ರಾಜಕೀಯ ಏನೇ ಇದ್ದರೂ ಬಿಗುಮಾನದಿಂದ ಗೌರವಯುತವಾಗಿ ನಡೆದುಕೊಳ್ಳುವ ತಾರಾಗೆ ಒಳ್ಳೆಯತನದಲ್ಲಿ ಎಲ್ಲರನ್ನೂ ಸೆಳೆಯುವ ಮುಗ್ದ ಶಕ್ತಿ ಇದೆ.

ರಾಜಕೀಯದಲ್ಲಿ ಒಂದೊಂದೇ ಹೆಜ್ಜೆ ಮುಂದಿಟ್ಟುಕೊಂಡು ಬಂದ ತಾರಾ ಅನುರಾಧ, ವಿಧಾನ ಪರಿಷತ್ ಸದಸ್ಯಳಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿ ಎಲ್ಲರಿಂದಲೂ ಸೈ ಅನ್ನಿಸಿಕೊಂಡರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಗಮನಸೆಳೆದರು.

ಈಗ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ.
ಮುಖ್ಯಮಂತ್ರಿ ಮನೆಯಲ್ಲಿ ಹೊಸ ವರ್ಷದ ದಿನ ಸಿಕ್ಕಿದ್ದ ತಾರಾ, ಅರಣ್ಯ ಭವನದಲ್ಲಿರುವ ಅವರ ಹೊಸ‌ ಕಚೇರಿ ಕರೆದುಕೊಂಡು ಹೋಗಿ, ಸ್ವೀಟ್ ತಿನ್ನಿಸಿದ್ದಲ್ಲದೆ ಜೊತೆಗೆ ಕಾಫಿ ಕೊಡಿಸಿದರು. ಇನ್ನುಳಿದಂತೆ ಅದೇ ಲೋಕಾಭಿರಾಮ ಹರಟೆ. ನಾನು ಅವರಿಗೆ ಮಂಗಳೂರಿನಲ್ಲಿ ನಡೆದ ಕೆಯುಡಬ್ಲ್ಯೂಜೆ ರಾಜ್ಯ ಪತ್ರಕರ್ತರ ಸಮ್ಮೇಳನ ಸವಿ ನೆನಪಿನ ಸಂಚಿಕೆ ನೀಡಿದೆ.

ಪ್ರೀತಿಯಿಂದ ಈಗಲೂ ಶಿವಣ್ಣ ಎಂದೇ ಕರೆಯುವ ಅವರ ಸಹೋದರ ಪ್ರೀತಿ ಹೀಗೆಯೇ ಇರಲಿ, ಹಾಗೆ ಅವರು ಎತ್ತರೆತ್ತರಕ್ಕೆ ಬೆಳೆಯಲಿ.

ಶಿವಾನಂದ ತಗಡೂರು. ರಾಜ್ಯಾಧ್ಯಕ್ಷರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಬೆಂಗಳೂರು.

@@@@@@@@@@@@@@@

ಮಾಲತೇಶ್ ಅರಸ್ ಹರ್ತಿಕೋಟೆ. ಸಂಪಾದಕರು. ಸುದ್ದಿವಾಣಿ

Leave a Reply

Your email address will not be published. Required fields are marked *