ಹುಟ್ಟೂರು ತಗಡೂರು ಜಾತ್ರೆ ಮತ್ತು ಶಿವಾನಂದ ತಗಡೂರು ಅವರ ನಡುರಾತ್ರಿ ಪಯಣ…

My Story State

ತಗಡೂರು ಸಿದ್ಧಲಿಂಗೇಶ್ವರ & ಜಾತ್ರಾ ಮಹೋತ್ಸವ

ನಮ್ಮೂರು ತಗಡೂರಿನಲ್ಲಿ ಆಯುಧ ಪೂಜಾ ದಿನ ಗಣಪತಿ ಉತ್ಸವ, ವಿಜಯ ದಶಮಿ ದಿನ ಬನ್ನಿ ಮಂಟಪದ ಬಳಿ ಅಂಬು ಹಾಯುವುದು, ಬಾಳೆಗಿಡಕ್ಕೆ ಕೋವಿ ಹೊಡೆಯುವುದು ಸುತ್ತಮುತ್ತಲಿನ ಹಳ್ಳಿಗಳಲ್ಲಿ, ನೆಂಟರಿಷ್ಠರಲ್ಲಿ ಮನೆಮಾತಿನ‌ ಸಂಗತಿ.

ಇದಕ್ಕೊಂದು ಇತ್ತಿಚಿನ ಸೇರ್ಪಡೆ ಸಿದ್ಧಲಿಂಗೇಶ್ವರ ಜಾತ್ರೆ ಮಹೋತ್ಸವ. ಕೆರೆ ಏರಿ ಹಿಂದಿರುವ ಕಲ್ಲೇಶ್ವರ ದೇವಸ್ಥಾನ ಬಳಿ ತಗಡೂರು ಲಕ್ಕರಸನಹಳ್ಳಿ ಗ್ರಾಮಸ್ಥರು ವರ್ಷಕ್ಕೊಮ್ಮೆ ಮಾಡುವ ಎಡೆಗೆ ಪರ ಕೂಡ ಹಾಗೆ ಮನೆ ಮಾತು.

ಊರ ಹಿಂದೆ ಇರುವ ಯಡೆಯೂರು ಯೋಗಿ ಸಿದ್ಧಲಿಂಗೇಶ್ವರರು ತಪಸ್ಸು ಮಾಡಿದ ಗದ್ದುಗೆಗೆ ವರ್ಷಕ್ಕೊಮ್ಮೆ ಪೂಜೆ, ಜಾತ್ರೆ, ಉತ್ಸವ ಮಾಡುವುದು ತತ್ಸಂಬಂಧಿತ ಕಾರ್ಯಕ್ರಮವಾಗಿ ನಡೆಯುತ್ತಿದೆ. ಇತ್ತೀಚೆಗೆ ಗ್ರಾಮದ ಯುವ ಉತ್ಸಾಹಿ ಯುವಕರು ಈ ಕಾರ್ಯವನ್ನು ಅಚ್ಚುಕಟ್ಟಾಗಿ ಸಂಘಟಿಸಿ ನಡೆಸುತ್ತಿದ್ದಾರೆ.

ಊರಿನ ಜಾತ್ರೆಗೆ ಬರಬೇಕು ಎಂದು ಹುಡುಗರೆಲ್ಲ ಪಟ್ಟು ಹಿಡಿದು ಕರೆದಾಗ ಇಲ್ಲ ಎನ್ನಲಾಗದೆ, ಊರಿನ ಅಭಿಮಾನದಿಂದ ಹೋಗಿದ್ದೆ. ಅಲ್ಲಿ ವೇದಿಕೆಯಲ್ಲಿ ಹೂ ಹಾರ ಹಾಕಿ ಗೌರವಿಸಿ ಮಾತನಾಡಿಸಿದರು. ನನ್ನೊಟ್ಟಿಗೆ ವಿಜಯ ಕರ್ನಾಟಕ ಪ್ರಕಾಶ್, ಪ್ರಜಾವಾಣಿ ಗುರು ಬಂದಿದ್ದರು. ಅಲ್ಲಿ ಶಾಸಕರಾದ ಸಿ.ಎನ್.ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಸೇರಿದಂತೆ ಎಲ್ಲರೂ ಸಿಕ್ಕರು. ಅವರಿಗೂ ಊರಿನ ಗೌರವ ನೀಡಿ ಬೀಳ್ಕೊಟ್ಟೆವು.

ಗ್ರಾಮೀಣ ಸೊಗಡಿನ ಜಾತ್ರೆ ಕಾರ್ಯಕ್ರಮ ಸರಳವಾಗಿ ನಡೆಯಿತು. ರಾತ್ರಿ ಲಿಂಗದವೀರರ ಕುಣಿತ ಮತ್ತು ರಸಮಂಜರಿ ಕಾರ್ಯಕ್ರಮ ಜಗಮಗಿಸುವ ಲೈಟಿಂಗ್ ನಡುವೆ ಸರಳವಾಗಿದ್ದವು.

ತಗಡೂರು ಕಾರ್ಯಕ್ರಮ ಅಂದರೆ ಅಲ್ಲಿ ರಂಗಾಪುರ, ಲಕ್ಕರಸನಹಳ್ಳಿ, ಹೆಗ್ಗಡಿಗೆರೆ, ಭೂವನಹಳ್ಳಿ, ಓಬಳಾಪುರ, ಕಲ್ಲೇಸೋಮನಹಳ್ಳಿ, ಕಾಮನಾಯಕನಹಳ್ಳಿ ಸುತ್ತಮುತ್ತಲಿನ ಗ್ರಾಮಕ್ಕೆ ಆಕರ್ಷಣೆ.

ಊರು ಮನೆ ಕಾರ್ಯಕ್ರಮ, ಜಾತ್ರೆ ಎಲ್ಲವೂ ಕೋವಿಡ್ ನಡುವೆಯೇ ಸರಳ ಆಚರಣೆ ಮಾಡಿದ ಯುವಕರ ಸಂಘಟನೆಗೊಂದು, ಧನ್ಯವಾದ ಹೇಳಿ ಹೊರಟೆ.

ನಾನು ತಗಡೂರು ಬಸವೇಶ್ವರ ಯುವಕ ರೈತ ಸಂಘದ ಅಧ್ಯಕ್ಷನಾಗಿ ಒಂದು ದಶಕಗಳ ಕಾಲ ನಡೆಸಿದ ಗಣಪತಿ ಉತ್ಸವ, ನಾಟಕ, ಹಾಸ್ಯ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮಗಳೆಲ್ಲವೂ ದಾರಿಯುದ್ದಕ್ಕೂ ನೆನಪಾಗುತ್ತಲೇ ಇದ್ದವು.

 

ಬರಹ: ಶಿವಾನಂದ ತಗಡೂರು. ರಾಜ್ಯಾಧ್ಯಕ್ಷರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.

Leave a Reply

Your email address will not be published. Required fields are marked *