ಮಾಲತೇಶ್ ಅರಸ್ ಹರ್ತಿಕೋಟೆ ಸಾರಥ್ಯದಲ್ಲಿ
ನಾನು ಗಂಡಲ್ಲ
ನಾನು ಹೆಣ್ಣಲ್ಲ
ಗಂಡುಹೆಣ್ಣೆಂಬ ಭೇದ ನನಗಿಲ್ಲ!
ಗಂಡು ಸಿಕ್ಕಿದಾಗ ಹೆಣ್ಣಾಗುತ್ತೇನೆ,
ಹೆಣ್ಣು ಸಿಕ್ಕಿದಾಗ ಗಂಡಾಗುತ್ತೇನೆ
ಪಾತ್ರ ಬದಲಿಸುತ್ತೇನೆ!
ಕತ್ತಲಲ್ಲಿ ಬೆತ್ತಲಾಗುತ್ತೇನೆ
ಬೆತ್ತಲಲ್ಲಿ ಬಯಲಾಗುತ್ತೇನೆ!
ಬಯಲ ಬೆತ್ತಲೆಯಲ್ಲಿ
ಈ ನನ್ನ ದೇಹವೂ ನನ್ನದಲ್ಲ
ಪಂಚಭೂತಗಳ ಜೀವಭಾವ!
ಸಮುದ್ರದಲ್ಲಿ ತೆರೆಯಾದ ಮೇಲೆ ತೆರೆಯೊಂದು
ಬಂದು ದಡಕೆ ಅಪ್ಪಳಿಸುವಂತೆ
ಗಂಡೆಂಬ ಅಲೆ ಹೆಣ್ಣೆಂಬ ಅಲೆ
ಅಂಕೆಗಳಿಗೆ ದಕ್ಕದ ಅಲೆಗಳು
ಅಪ್ಪಳಿಸಿದ್ದವು ನನ್ನನ್ನು,
ಅಲೆಗಳೆಂದರೆ ಬರೀ ನೀರು!
ನೀರು ಮೈಸುತ್ತಿ
ನಾನು ನೀರ್ಗಲ್ಲಾದೆ
ಹಿಮಪರ್ವತವಾದೆ
ಬೀಸು ಬಿಸಿಲು ಗಾಳಿಗೆ ಮೈಯೊಡ್ಡಿ ಕರಗಿ ಬಯಲಾದೆ!
ನೀರು ಮೈಸುತ್ತಿ
ನಾನು
ನೀರಗುಳ್ಳೆಯಾದೆ
ಸುಳಿವೆಲರಿಗೆ ಮೈಯೊಡ್ಡಿ ಪಟ್ಟನೆ ಒಡೆದು ಬಯಲಾಗಿದ್ದೆ!
ಬಯಲ ಜೀವನದಲ್ಲಿ
ಗಂಡು ನಾನಲ್ಲ
ಹೆಣ್ಣು ನಾನಲ್ಲ!
ಡಾ.ವಡ್ಡಗೆರೆ ನಾಗರಾಜಯ್ಯ
8722724174