ಮಾಲತೇಶ್ ಅರಸ್ ಹರ್ತಿಕೋಟೆ
ಬೆಂಗಳೂರು: ಮಾರ್ಚ್ 6ರಂದು ಶನಿವಾರ ಕನ್ನಡದ ಹೆಮ್ಮೆಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಿತ್ರದುರ್ಗ ಮೂಲದ ಶಶಿಧರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಚಿತ್ರಪಥ’ ಡಿಜಿಟಲ್ ಸಿನಿಮಾ ಮಾಧ್ಯಮವನ್ನು (www.chithrapatha.com) ಅನಾವರಣಗೊಳಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್, ಚಿತ್ರಸಾಹಿತಿ ಕವಿರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು. ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿರುವ ರೇಣುಕಾಂಬ ಸ್ಟುಡಿಯೋಕ್ಕೆ ತಪ್ಪದೇ ಬನ್ನಿ..
ಚಿತ್ರಪಥ ಸಂಪಾದಕ – ಶಶಿಧರ ಚಿತ್ರದುರ್ಗ ಅವರು
ಹದಿಮೂರು ವರ್ಷಗಳ ಕಾಲ ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಸ್ಟೇಟ್ ವೆಬ್ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು, 2015ನೇ ಸಾಲಿನ ರಾಜ್ಯಸರ್ಕಾರದ ಸಿನಿಮಾ ಸಬ್ಸಿಡಿ ಕಮಿಟಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ಫ್ರೀಲ್ಯಾನ್ಸ್ ಸಿನಿಮಾ ಪತ್ರಕರ್ತ.
ಚಿತ್ರಪಥದ ಹಿನ್ನೆಲೆ:
ಸಿನಿಮಾ ಆರ್ಕೈವ್ ಪೋರ್ಟಲ್
ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ – ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್‌ನ ಆಶಯ. ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ – ಲೇಖನ – ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.
ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ – ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು – ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ. ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ.
‘ನಾಸ್ಟಾಲ್ಜಿಯಾ’, ‘ಚಿತ್ರ-ಕಥೆ’, ‘ಶೂಟಿಂಗ್ ಸೋಜಿಗ’, ‘ಮಾಹಿತಿ – ವಿಶೇಷ’, ‘ನೆನಪು’, ‘ಪೋಸ್ಟರ್ ಮಾಹಿತಿ’, ‘ಅತಿಥಿ ಅಕ್ಷರ’ ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್ ಆಗಿ ಮಾಹಿತಿ ನೀಡುವ ಪ್ರಯತ್ನ. ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ.
ಭವಾನಿ ಲಕ್ಷ್ಮೀನಾರಾಯಣ ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ-ನಟಿಯರು, ತಂತ್ರಜ್ಞರಿಗೆ ಅವರು ‘ಸ್ಟಾರ್ ಫೋಟೋಗ್ರಾಫರ್’! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು.
ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್‍ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.
ಪ್ರಗತಿ ಅಶ್ವತ್ಥನಾರಾಯಣ
ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು `ಪ್ರಗತಿ’ಯ ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ `ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ `ಪ್ರೇಮ ಪ್ರೇಮ ಪ್ರೇಮ’. `ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. `ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೋಗ್ರಾಫರ್‍ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.
‘ಚಿತ್ರಪಥ’ ಪೋರ್ಟಲ್ ವಿನ್ಯಾಸ – ಕೃಷ್ಣೇಗೌಡ ಎನ್.ಎಲ್. ಶೀರ್ಷಿಕೆ, ಲೋಗೋ ವಿನ್ಯಾಸ – ರಂಜಿತ್ ರಾಮಚಂದ್ರನ್.
ಮಾಲತೇಶ್ ಅರಸ್ ಹರ್ತಿಕೋಟೆ. ಸಂಪಾದಕ. ಸುದ್ದಿವಾಣಿ. www.suddivaani.com