ಕತ್ತು ಕೊಯ್ದು ರಕ್ಕಸರ ಅಟ್ಟಹಾಸ: ಲಾಡ್ಜ್ ನಲ್ಲಿ ಹರಿದ ರಕ್ತ, ನಾಲ್ಕು ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ
ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೆಸರಲ್ಲಿ
ಬೇನಾಮಿ ಆಸ್ತಿ.: ಮಂಜುನಾಥ್ ದುಮ್ಮವಾಡ ಜತೆ ಮಹಾಂತೇಶ್ ಶಿರೂರು ಸೇರಿ ಗುರೂಜಿ ಕೊಲೆ
ಮಾಲತೇಶ್ ಅರಸ್ ಹರ್ತಿಕೋಟೆ
ಬೆಂಗಳೂರು/ ಹುಬ್ಬಳ್ಳಿ: ಅವರು ಸುಪ್ರಸಿದ್ಧ ವಾಸ್ತು ಗುರು, ಮಾನವ ಗುರು, ಸರಳ ಗುರು, ಇಡೀ ನಾಡಿಗೆ ನಾಡೇ ಫೇಮಸ್ ಆಗಿದ್ದ ಮತ್ತು ಅಕ್ಕ ಪಕ್ಕದ ರಾಜ್ಯದಿಂದ ಮುಂಬೈನವರೆಗೂ ಫೇಮಸ್ ಆಗಿದ್ದ ಸರಳವಾಸ್ತು ಹೆಸರಿನ ಚಂದ್ರಶೇಖರ್ ಗುರೂಜಿ. ಹಾಡ ಹಗಲೇ ನಂಬಿದವರಿಂದಲೇ ಎದೆಗೆ ಚಾಕುವಿನಿಂದ ಇರಿದು, ಕುತ್ತಿಗೆ ಕೊಯ್ದು ಇಡೀ ದೇಹವೇ ರಕ್ತ ಸಿಕ್ತವಾಗಿ ಭೀಭತ್ಸವಾಗಿ, ಬರ್ಬರವಾಗಿ, ಘನಘೋರವಾಗಿ ಹತ್ಯೆಯಾಗಿದ್ದಾರೆ.
ಕೋಟಿ ಕೋಟಿ ವ್ಯವಹಾರ, ಬೇನಾಮಿ ಆಸ್ತಿ, ಹೆಣ್ಣಿನ ನೆರಳು, ಸಹೋದ್ಯೋಗಿಗಳ ಸೇಡು, ಮೋಸ ಮತ್ತು ಹಣಕಾಸಿನ ದ್ವೇಷ, ಭೀಕರ ಹತ್ಯೆ. ನೆತ್ತರದೋಕುಳಿ. ಹೌದು ಇದು 40 ಸೆಕೆಂಡ್ ನಲ್ಲಿ ನಡೆದ ಮರ್ಡರ್, 60 ಬಾರಿ ಭೀಕರ ಇರಿತ, ಬೆಚ್ಚಿ ಬೀಳಿಸಿ ಘಟನೆ. ಅಸಲಿಗೆ ಗುರೂಜಿಗೆ ವಾಸ್ತು ಕೈ ಹಿಡಿಯಲಿಲ್ಲ, ದಿಕ್ಕೇ ತೋಚಲಿಲ್ಲ.
ಹಂತಕರಾದ ಮಂಜುನಾಥ್ ಮತ್ತು ಮಹಂತೇಶ್
ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ವಿದ್ಯಾನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ ಗುರೂಜಿ ತಂಗಿದ್ದರು. ಆಪ್ತರಾಗಿದ್ದವರೇ ಹಂತಕರಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಹೋಟೆಲ್ ನಲ್ಲಿ ರಕ್ತದೋಕುಳಿಯಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗೂರುಜಿ ಕೊಲೆ ಪ್ರಕರಣಕ್ಕೆ ಸಂಬಂಧಿತವಾಗಿ ಹುಬ್ಬಳ್ಳಿಯ ಪೊಲೀಸ್ ಆಯುಕ್ತ ಲಾಬೂರಾಮ್ ಸೂಚನೆಯಂತೆ ಬೆಳಗಾವಿಯ ರಾಮದುರ್ಗದಲ್ಲಿ ಇಬ್ಬರು ಆರೋಪಿಗಳನ್ನು ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಹಂತಕರಾದ ಮಹಾಂತೇಶ್ ಶಿರೂರು ಮತ್ತು ಮಂಜುನಾಥ್ ದುಮ್ಮವಾಡ ಅವರ ಫೋನ್ ಲೋಕೇಶನ್ ಆಧಾರದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಸರಳ ವಾಸ್ತುವಿನ ಸಂಶೋಧಕರಾಗಿದ್ದ ಡಾ.ಚಂದ್ರಶೇಖರ ಗುರೂಜಿ ಅವರು ಚಿಕ್ಕಂದಿನಲ್ಲೇ ಆಧ್ಯಾತ್ಮದತ್ತ ಆಸಕ್ತಿ ಹೊಂದಿದ್ದರು 8 ವರ್ಷ ವಯಸ್ಸಿನಲ್ಲಿದ್ದಾಗಲೇ ತಮ್ಮೂರಿನ ಹಳೆಯ ದೇವಾಲಯವೊಂದರ ಜೀರ್ಣೋದ್ಧಾರಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿ ಮಾಡಿದ್ದರು. 14 ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಬಯಕೆ ಅವರದ್ದಾಗಿತ್ತಾದರೂ ಅನಾರೋಗ್ಯ ಕಾರಣಕ್ಕೆ ಅದು ಸಾಕಾರಗೊಳ್ಳಲಿಲ್ಲ. ಸಿವಿಲ್ ಇಂಜಿನಿಯರ್ ಪದವಿ ಪಡೆದ ಬಳಿಕ ಮುಂಬೈನಲ್ಲಿ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಆರಂಭಿಸಿದ್ದರು.
1995 ರಲ್ಲಿ “ ಶರಣ ಸಂಕುಲ ಟ್ರಸ್ಟ್ ” ಆರಂಭಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾದರು 1998 ರಲ್ಲಿ ಅವರಿಗೆ ಕನಸಿನಲ್ಲಿ ತಮ್ಮ ಮನೆಯ ಆಕಾರ ಕಾಣಿಸತೊಡಗಿತು ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದ ಬಗ್ಗೆ ಆಲೋಚಿಸ ತೊಡಗಿದರು. ಪೂರ್ವಜರ ತಿಳಿವಳಿ ಹಾಗೂ ಸಂಪನ್ಮೂಲ ಕ್ರೂಡೀಕರಿಸಿ ಸುಂದರ ಕಲಾಕೃತಿಗಳನ್ನು , ಶಾಸ್ತ್ರಗಳನ್ನು ಹೇಗೆ ರೂಪಿಸಿದ್ದರು ಮತ್ತು ಇವರು ದೈನಂದಿನ ಬದುಕಿನಲ್ಲಿ ಏನು ಅಗತ್ಯ ಎಂಬುದರ ಬಗ್ಗೆ ತಿಳಿಯುತ್ತಾ ಹೋದರು ನಂತರ ‘ ಸರಳವಾಸ್ತು ‘ ಬಗ್ಗೆ ಸಂಶೋಧನೆ ಮಾಡುತ್ತಾ ಹೋದರು.
ಯುಟ್ಯೂಬ್ ಜನರಿಗೆ ಸರಳ ವಾಸ್ತುವಿನ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ಚಂದ್ರಶೇಖರ ಗುರೂಜಿ ನಿರತವಾಗಿದ್ದರು. ಪ್ರತ್ಯೇಕ ಸರಳ ವಾಹಿನಿ ತೆರೆದು ವಾಸ್ತು ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಜನರಿಗೆ ಆಘಾತ ನೀಡಿದೆ.
ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಕ್ರಮ : ಸಿಎಂ
ಬೆಂಗಳೂರು : ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಹೀನ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯನ್ನು ನೀಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತಿಳಿಸಿದರು. ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಹೀನ ಕೃತ್ಯ ಹಾಗೂ ದುರದೃಷ್ಟಕರವಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಎಲ್ಲ ಸ್ಪಷ್ಟವಾಗಿದೆ. ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಸಿಸಿಟಿವಿ ವಿಡಿಯೋದಲ್ಲಿರುವ ಕೊಲೆಪಾತಕರನ್ನು ಬಂಧಿಸಲಾಗಿದ್ದು ಬಹಿರಂಗವಾಗಿ ಇಂತಹ ಘಟನೆಗಳು ಅತ್ಯಂತ ಖಂಡನೀಯ ಎಂದರು.
ಯಾರು ಈ ಗುರೂಜಿ..
ಕೊಲೆಯಾದ ಚಂದ್ರಶೇಖರ್ ಗುರೂಜಿ ಮೂಲತಃ ಬಾಗಲಕೋಟೆ ನಿವಾಸಿ. ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ ಅವರ ಮೂಲ ಹೆಸರು. ಶಿಕ್ಷಣ ಎಲ್ಲವೂ ಬಾಗಲಕೋಟೆಯಲ್ಲೇ ಮಾಡಿದ್ದು ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಮುಗಿಸಿದ್ದರು. ೧೯೮೮ ರಲ್ಲಿ ಮುಂಬೈಗೆ ತೆರಳಿ ಮುಂಬೈನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದರು. ನಂತರ ೬ ವರ್ಷದ ಬಳಿಕ ಸಿಂಗಾಪುರಕ್ಕೆ ಹೋಗಿ ವಾಸ್ತು ಶಾಸ್ತ್ರ ಅಧ್ಯಯನ ಮಾಡಿದ್ದರು. ಸಿಂಗಾಪುರದಿಂದ ಪುನಃ ಮುಂಬೈಗೆ ಬಂದು ವಾಸಮಾಡಿದ್ದರು. ಮೊದಲು ಮುಂಬೈನಲ್ಲಿ ಸರಳವಾಸ್ತು ಕಚೇರಿ ಆರಂಭಿಸಿ ನಂತರ ಬೆಂಗಳೂರು – ಹುಬ್ಬಳ್ಳಿಯಲ್ಲಿ ಸರಳವಾಸ್ತು ಕಚೇರಿ ಮಾಡಿದ್ದರು. ಪತ್ನಿ ಮೊದಲ ಪತ್ನಿ ಸಾವನ್ನಪ್ಪಿದ್ದು.ಮೊದಲ ಪತ್ನಿಗೆ ಒಬ್ಬಳು ಮಗಳು ಇದ್ದಾರೆ. ಎರಡನೇ ಪತ್ನಿಗೆ ಮಕ್ಕಳಿಲ್ಲ. ಸದ್ಯ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಸಂಬಂಧಿಕರು ಇದ್ದಾರೆ.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ.