ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಕಟ್ಟಡ ನಿರ್ಮಾಣ : ಎಂ.ನಿಶಾನಿ ಜಯಣ್ಣ

Chitradurga Districts Bureau

ಚಿತ್ರದುರ್ಗ: ಯಾವುದೇ ಸಹಕಾರ ಸಂಘ ಅಭಿವೃದ್ದಿಯಾಗಬೇಕಾದರೆ ಸಿಬ್ಬಂದಿಗಳ ಹಾಗೂ ಸದಸ್ಯರುಗಳ ಪ್ರಾಮಾಣಿಕತೆ ಹಾಗೂ ಸಹಕಾರ ಅತ್ಯಗತ್ಯ. ರೈತರ ಜೊತೆ ಉತ್ತಮ ಒಡನಾಟವಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನು ಲಾಭದತ್ತ ಮುನ್ನೆಡಸಬೇಕಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಹೇಳಿದರು.
ನಗರದ ಐ.ಎ.ಎ.ಹಾಲ್‍ನಲ್ಲಿ ಸೋಮವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಈಗಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ತುಂಬಾ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. 1957 ರಲ್ಲಿ ಸ್ಥಾಪನೆಯಾದ ಕೃಷಿ ಪತ್ತಿನ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದಿದೆ. 3650 ಸದಸ್ಯರುಗಳನ್ನೊಳಗೊಂಡಿದ್ದು, ಮದಕರಿಪುರ, ಕವಾಡಿಗರಹಟ್ಟಿ, ಗಾರೆಹಟ್ಟಿಯಲ್ಲಿಯೂ ಕಟ್ಟಡ ಹೊಂದಿದೆ. ಮುಖ್ಯ ಕಟ್ಟಡವನ್ನು ಇದುವರೆವಿಗೂ ದುರಸ್ಥಿಪಡಿಸಿಲ್ಲದ ಕಾರಣ ಮುಂದೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಲಾಭದತ್ತ ಕೊಂಡೊಯ್ಯಲಾಗಿದೆ. ಕಳೆದ ಸಾಲಿನಲ್ಲಿ 323 ಸದಸ್ಯರು ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಂಡಿದ್ದಾರಲ್ಲದೆ ಆಹಾರ ಧಾನ್ಯಗಳನ್ನು ಸಂಘದಿಂದ ವಿತರಿಸಲಾಗುತ್ತಿದೆ. ಬಂಗಾರದ ಮೇಲೆ ಸಾಲವನ್ನು ರೈತರಿಗೆ ವಿತರಿಸಲಾಗಿದೆ. ಆಡಳಿತ ಮಂಡಳಿಯ ಸಿಬ್ಬಂದಿ ಹಾಗೂ ಸದಸ್ಯರುಗಳ ಸಹಕಾರದಿಂದ ಸಂಘ ಈ ಮಟಕ್ಕೆ ಬೆಳೆಯಲು ಸಾಧ್ಯವಾಯಿತೆಂದರು.

ರೈತರಿಗೆ ಅನುಕೂಲ ಕಲ್ಪಿಸಿಕೊಡುವುದಕ್ಕಾಗಿಯೇ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಲಿಷ್ಟವಾಗಿ ಬೆಳೆಯಬೇಕಾದರೆ ಯಾರಲ್ಲಿಯೂ ಸ್ವಾರ್ಥವಿರಬಾರದು. ಸಣ್ಣಪುಟ್ಟ ಸಮಸ್ಯೆ, ಭಿನ್ನಾಭಿಪ್ರಾಯಗಳಿದ್ದರೆ ಎಲ್ಲರೂ ಕುಳಿತು ಚರ್ಚಿಸಿ ಎಲ್ಲವನ್ನು ಸರಿಪಡಿಸಿಕೊಳ್ಳೋಣ. ಸದಸ್ಯರುಗಳು ಪಡೆದಿರುವ ಸಾಲವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ ಸಂಘದ ಶ್ರೇಯೋಭಿವೃದ್ದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರುಗಳಾದ ಇ.ಈಶ್ವರಪ್ಪ, ಸಿ.ಹೆಚ್.ಸೂರ್ಯನಾರಾಯಣ, ಜಯಣ್ಣ, ಹೆಚ್.ಆರ್.ನಾರಾಯಣಸ್ವಾಮಿ, ಚಿಕ್ಕಣ್ಣ, ಪ್ರಹಲಾದಪ್ಪ, ಅಜ್ಜಪ್ಪ, ರಾಜುನಾಯಕ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಸ್ವಾಮಿ ನಾಯಕ್ ವಾರ್ಷಿಕ ವರದಿ ಮಂಡಿಸಿದರು.

Leave a Reply

Your email address will not be published. Required fields are marked *