“ಪತ್ರಿಕಾ ವಿತರಕರ ದಿನಾಚರಣೆ… ಹಾಗಂತ ದಿನಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಗಳಲ್ಲಿ ಶುಭಾಶಯಗಳ ವಿನಿಮಯ ಆಗಿದೆ, ತುಂಬಾ ಸಂತೋಷ.
ಆದರೆ ವರ್ಷಕ್ಕೊಮ್ಮೆ ಶುಭಾಶಯ ಕೋರಿದರೆ ಸಾಕೆ? ಹೀಗೆ ಶುಭ ಕೋರುವುದರಿಂದ ತಿಂಗಳಿಗೆ ರೂ. 300 ರಿಂದ 3000 ಸಾವಿರ ಕೂಲಿ ಪಡೆಯುವವರ ಸಮಸ್ಯೆ ನೀಗುತ್ತಾ ಎನ್ನುವ ಪ್ರಶ್ನೆ ಮೂಲತಃ ಒಬ್ಬ ಪತ್ರಿಕೆಯ ಏಜೆಂಟ್ ಆಗಿ, ವಿತರಕನಾಗಿದ್ದ ನನ್ನಲ್ಲಿ ಮೂಡುತ್ತೆ.
2012 ರ ಮೇ 02 ರಿಂದ ಜುಲೈ 08 ರ ವರೆಗೆ ನಾನು ಯಳಂದೂರಿನಲ್ಲಿ ವಿಜಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದೆ. ಆ ವೇಳೆ ಹೊಸಬನಾದ್ದರಿಂದ ನನ್ನ ಬಳಿ ಪತ್ರಿಕೆ ವಿತರಿಸಲು ಹುಡುಗರೇ ಬರುತ್ತಿರಲಿಲ್ಲ. ಅನಿವಾರ್ಯವಾಗಿ ಬೈಸಿಕಲ್ ಏರಿ ನಾನೇ ಮನೆ ಮನೆಗೆ ಪತ್ರಿಕೆ ಹಾಕಲು ಶುರು ಮಾಡಿದೆ. ನಾನು ಯಳಂದೂರು ಬಿಡಲು ಇನ್ನು ಇಪ್ಪತ್ತು ದಿನಗಳಿವೆ ಎನ್ನುವಾಗ ಗುಂಬಳ್ಳಿ ಗ್ರಾಮದ ಎಂಟನೇ ತರಗತಿ ಓದುತ್ತಿದ್ದ ಹುಡುಗನೊಬ್ಬ ನಾನು ಪೇಪರ್ ಹಾಕೋಕೆ ಬರ್ತೀನಿ ಅಣ್ಣ ಎಂದು ಬಂದ. ಆ ಹುಡುಗನಿಗೆ ನಿತ್ಯವೂ ನೂರು ಪತ್ರಿಕೆ ಹಂಚಲು ತಿಳಿಸಿದ್ದೆ. ತಿಂಗಳಿಗೆ ರೂ.400 ಕೊಡುವುದಾಗಿ ಹೇಳಿ ನೇಮಿಸಿಕೊಂಡಿದ್ದೆ. ಅಷ್ಟರಲ್ಲಿ ಯಳಂದೂರು ತಾಲ್ಲೂಕಿನ ಬಿಡಿ ವರದಿಗಾರನಾಗಿದ್ದ ನನ್ನನ್ನು(ಸ್ಟ್ರಿಂಜರ್) ಜಿಲ್ಲಾ ವರದಿಗಾರನಾಗಿ ವಿಜಯವಾಣಿ ಆಡಳಿತ ಮಂಡಳಿ ನಿಯೋಜಿಸಿತು. 2012 ಜುಲೈ 09 ರಂದು ವಿಜಯವಾಣಿ ಪತ್ರಿಕೆಯ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಳಿಕ ನಾನು ಪೂರ್ಣಕಾಲಿಕ ವರದಿಗಾರನಾದೆ. ಆಗ ನನಗಿದ್ದ ಪತ್ರಿಕೆ ಏಜೆನ್ಸಿಯನ್ನು ಇನ್ನೊಬ್ಬರಿಗೆ ಬಿಟ್ಟು ಕೊಡಬೇಕಾಯಿತು. ಅದರಂತೆ ವಿಜಯವಾಣಿ ಯಳಂದೂರು ತಾಲ್ಲೂಕು ವರದಿಗಾರನಾಗಿ ಬಂದ ಹೊನ್ನೂರು ಪುಟ್ಟಸ್ವಾಮಿಯವರಿಗೆ ಏಜೆನ್ಸಿ ವರ್ಗಾಯಿಸಿದ್ದೆ. ಆ ಬಳಿಕ ಅವರು ಅದನ್ನು ಈಗಿರುವ ವರದಿಗಾರ ಡಿ.ಪಿ.ಮಹೇಶ್ ಗೆ ವರ್ಗಾಯಿಸಿದರು.
ಪ್ರಜಾವಾಣಿಯೊಂದನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಅಲಿಖಿತ ನಿಯಮವೊಂದಿದೆ; ಯಾರಾದರೂ ತಾಲ್ಲೂಕು ಅಥವಾ ಹೋಬಳಿ ಮಟ್ಟದ ರಿಪೋರ್ಟರ್ ಆಗಲು ಬಯಸಿದರೆ, ಆ ವ್ಯಕ್ತಿ ಯಾವ ಪತ್ರಿಕೆಗೆ ವರದಿಗಾರನಾಗಲು ಬಯಸುತ್ತಾನೋ, ಆ ಪತ್ರಿಕೆಯ ಏಜೆನ್ಸಿ ತೆಗೆದುಕೊಳ್ಳಲೇಬೇಕು. ಕೆಲವೊಮ್ಮೆ ಇಲ್ಲೂ ಸ್ಪರ್ಧೆಗಳು ಏರ್ಪಡುತ್ತವೆ. ಒಬ್ಬ ಇನ್ನೂರು ಪತ್ರಿಕೆ ವಿತರಿಸುತ್ತೇನೆ ಎಂದರೆ ಮತ್ತೊಬ್ಬ ಐದು ನೂರು ಪತ್ರಿಕೆ ಹಾಕ್ತೇನೆ, ನನಗೇ ವರದಿಗಾರಿಕೆ ಕೊಡಿ ಎನ್ನುವಷ್ಟರ ಮಟ್ಟಿಗೆ ಪೈಪೋಟಿ ನಡೆಯುತ್ತೆ. ಈಗಿಗಂತೂ ಸ್ಥಳೀಯ ಹಾಗೂ ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಜಿಲ್ಲಾ ವರದಿಗಾರನಾಗಲೂ ಪತ್ರಿಕೆ ಏಜೆನ್ಸಿ ಪಡೆಯಬೇಕಾಗಿದೆ.
ಹೀಗೆ ಏಜೆನ್ಸಿ ಪಡೆಯುವ ವರದಿಗಾರರಿಗೆ ಆ ಪತ್ರಿಕೆಯ ಬೆಲೆಗೆ ಅನುಗುಣವಾಗಿ ಕಮಿಶನ್ ಸಿಗುತ್ತದೆ. ತಮಗೆ ಬಂದ ಕಮಿಶನ್ ಹಣದಲ್ಲೇ ಪತ್ರಿಕೆ ವಿತರಿಸುವ ಹುಡುಗರಿಗೂ ಇಂತಿಷ್ಟು ಎಂದು ಕೊಡಬೇಕು. ಕನಿಷ್ಠ ನೂರು ಪತ್ರಿಕೆ ವಿತರಿಸುತ್ತಿದ್ದರೆ ತಿಂಗಳಿಗೆ ರೂ. 300-400 ಕೊಡಬೇಕು. ಹೆಚ್ಚು ಪತ್ರಿಕೆಗಳನ್ನು ಹಾಕುತ್ತಿದ್ದರೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಹೀಗೆ ನಿತ್ಯವೂ ಪತ್ರಿಕೆ ಹಂಚುವವರು ಶಾಲಾ-ಕಾಲೇಜಿಗೆ ಹೋಗುವ ಚಿಕ್ಕ ಹುಡುಗರು ಮಾತ್ರವೇ ಆಗಿರುವುದಿಲ್ಲ. ವಯಸ್ಸಾದ ಅಜ್ಜ ಕೂಡ ಅಲ್ಲಿರುತ್ತಾರೆ. ಬೆಳಿಗ್ಗೆ ಒಂದರಿಂದ ಎರಡು ಗಂಟೆ ಪೇಪರ್ ಹಾಕಿದ್ರೆ ಒಂದಷ್ಟು ಕಾಸು ಸಿಗುತ್ತಲ್ಲ, ಮನೆ ಖರ್ಚಿಗೋ, ತನ್ನ ಸ್ವಂತದ ಖರ್ಚಿಗೋ ಆಗುತ್ತಲ್ಲ ಎಂಬ ಕಿರು ಆಸೆಯೊಂದು ಅವರಲ್ಲಿರುತ್ತೆ.
ಹೀಗೆ ಪತ್ರಿಕೆ ವಿತರಣೆ ಜವಾಬ್ದಾರಿ ಹೊತ್ತವರು ನಿತ್ಯವೂ ಬೆಳಿಗ್ಗೆ ನಾಲ್ಕರಿಂದ ಐದು ಗಂಟೆಯೊಳಗೆ ಏಳಬೇಕಾಗುತ್ತೆ. ಇಡೀ ಊರು ಕಣ್ಣು ಬಿಡುವ ಮುನ್ನವೇ ಕಾಂಪೌಂಡ್ ನ ಒಳಗೋ, ಪಡಸಾಲೆಯ ಮೇಲೋ ಪತ್ರಿಕೆ ಬಿದ್ದಿರುತ್ತದೆ. ಬೈಸಿಕಲ್ ನಲ್ಲಿ ಚಲಿಸುತ್ತಲೇ ಮೇಲ್ ಮಹಡಿಯ ಮನೆಗೆ ಪತ್ರಿಕೆಗೆ ದಾರ ಸುತ್ತಿ ಎಸೆಯುವಾಗ ಅದು ಪಕ್ಕದ ಮನೆಗೋ, ಮನೆಯ ಮುಂದಿನ ಚರಂಡಿಗೋ ಬಿದ್ದಿರುತ್ತದೆ. ಆಗ ಏಜೆಂಟ್ ಗೆ ಕರೆ ಮಾಡಿ ಮನೆ ಮಾಲೀಕ ಇವತ್ತು ಪತ್ರಿಕೆಯೇ ಬಂದಿಲ್ಲ. ಬಿಲ್ ನಲ್ಲಿ ಹಿಡ್ಕೊಂಡು ಕೊಡ್ತೀನಿ ಎನ್ನುತ್ತಾನೆ. ಆಗ ಏಜೆಂಟ್ ಈ ವಿತರಕನಿಗೆ ಬೈತಾನೆ. ಅಲ್ಲದೇ ತಿಂಗಳಾಗುತ್ತಿದ್ದಂತೆ ಪತ್ರಿಕೆ ಹಂಚಿದ ಮನೆಯಿಂದ ಬಿಲ್ ವಸೂಲಿ ಮಾಡುವ ಕಾಯಕವೂ ಈ ವಿತರಕರದ್ದೇ ಆಗಿರುತ್ತೆ. ಪತ್ರಿಕೆ ಹಾಕಿಸಿಕೊಂಡವರು ಹೋದ ಕೂಡಲೇ ಹಣ ಕೊಡುವುದಿಲ್ಲ. ಇಂದು ಬಾ ನಾಳೆ ಎಂದು ಸತಾಯಿಸುತ್ತಾನೆ. ಕೆಲವೊಮ್ಮೆ ಮುಂದಿನ ತಿಂಗಳು ಕೊಡ್ತೇನೆ ಹೋಗೋ ಎಂದು ಗದರುವವರೂ ಉಂಟು. ಹೀಗೆ ಏನೆಲ್ಲ ಬೈಗುಳಗಳು ಕೇಳಿ ಬಂದರೂ ಮರುದಿನದಿಂದ ಮತ್ತದೇ ಪೇಪರ್ ಹಂಚುವ ಕಾಯಕವನ್ನು ಮಾಡಲೇಬೇಕು.
ಅದು ಮಳೆಗಾಲವಿರಲಿ, ಚಳಿಗಾಲವಿರಲಿ, ದೊಂಬಿ, ಗಲಭೆ, ಕೊರೋನಾ ಕಾಲ ಹೀಗೆ ಎಂತದ್ದೇ ಸಂದರ್ಭ ಇದ್ದರೂ ತಪ್ಪದೇ ತನ್ನ ಕರ್ತವ್ಯ ಮಾಡುವ ಕಾಯಕ ಜೀವಿಗಳೆಂದರೆ ಅವರೇ ಪತ್ರಿಕಾ ವಿತರಕರು. ದಿನಪತ್ರಿಕೆಗಳ ಬೆನ್ನೆಲುಬೇ ಈ ವಿತರಕರು. ಆದ್ರೆ ಪತ್ರಿಕೆಗಳಿಗೆ ಪ್ರತಿ ತಿಂಗಳು ತನ್ನ ಬಾಬ್ತು ಹಣ ಪಾವತಿಸುವ ಏಜೆಂಟ್ ಗೊತ್ತಿರುತ್ತಾನೆಯೇ ಹೊರತು, ವಿತರಕರಲ್ಲ. ನಮ್ಮ ತಾಲೂಕಿಗೆ ಇಂತವರೇ ವರದಿಗಾರ ಆಗಬೇಕು. ನಮ್ಮ ಭಾಗದ ಸುದ್ದಿಗಳು ಸರಿಯಾಗಿ ಬರುತ್ತಿಲ್ಲ. ಓದುಗರು ಪತ್ರಿಕೆ ಬೇಡ ಅನ್ನುತ್ತಿದ್ದಾರೆ. ನಾಳೆಯಿಂದ ಪತ್ರಿಕೆ ಕಳಿಸಬೇಡಿ, ನಿಲ್ಲಿಸಿ ಬಿಡಿ ಎನ್ನುವ ಮಟ್ಟಿಗೆ ಏಜೆಂಟರು ಪ್ರಭಾವಿಗಳಾಗಿರುತ್ತಾರೆ. ಆದರೆ ವಿತರಕರು ಹಾಗಲ್ಲ. ಹಾಗನ್ನೋಕೆ ಸಾಧ್ಯವೂ ಇಲ್ಲ. ಕೆಲವೊಮ್ಮೆ ಏಜೆಂಟರು ಪತ್ರಿಕೆಗೆ ಜಾಹೀರಾತು ನೀಡಿ, ಕಚೇರಿಯಿಂದ ಕಮಿಶನ್ ಪಡೆಯುತ್ತಾರೆ. ಆ ಸೌಲಭ್ಯ ವಿತರಕರಿಗೆ ಇರಲ್ಲ. ಏಜೆಂಟ್ ತೋರಿಸಿದ ಲೈನ್ ಗೆ ಪತ್ರಿಕೆ ಹಾಕುವುದಷ್ಟೇ ಅವನ ಕೆಲಸವಾಗಿರುತ್ತೆ.
ಇಂತಹ ನಿರ್ದಿಷ್ಟವಾದ ಹುದ್ದೆಯಲ್ಲದ, ಖಚಿತ ಸಂಪಾದನೆ ಇಲ್ಲದ ವಿತರಕರ ಗೋಳು ಕಡಿಮೆಯಲ್ಲ. ಪತ್ರಿಕೆ ಹಾಕುತ್ತಿದ್ದ ವ್ಯಕ್ತಿಯೊಬ್ಬ ಮುಂದೆ ಏನಾದರೂ ಸಾಧಿಸಿದಾಗ, ನೋಡಿ, ಇವರು ಪತ್ರಿಕೆ ಹಾಕುತ್ತಲೇ ಇವತ್ತು ಇಂತಹ ಸಾಧನೆ ಮಾಡಿದ್ದಾರೆ ಎಂದು ಪ್ರಶಂಸಿಸುತ್ತೇವೆ. ಹಾಗೆ ಸಾಧನೆ ಮಾಡಲು ಎಷ್ಟು ಜನರಿಂದ ಸಾಧ್ಯ? ಒಂದು ವೇಳೆ ಏನೂ ಸಾಧಿಸದಿದ್ದರೆ ಆತ ಪತ್ರಿಕೆ ಹಂಚುತ್ತಲೇ ಇರಬೇಕು, ಹೆಚ್ಚೆಂದರೆ ವಿತರಕ ಏಜೆಂಟ್ ಆಗಬಹುದಷ್ಟೇ. ಏನಾದರೂ ಮಹತ್ತರ ಬದಲಾವಣೆ ಕಾಣಬೇಕಾದರೆ ಆ ಕೆಲಸ ನಿಲ್ಲಿಸಿ, ಬೇರೊಂದು ವೃತ್ತಿ ನೋಡಿಕೊಳ್ಳಬೇಕಷ್ಟೇ.
ಆಳುವ ಸರ್ಕಾರಗಳು, ಜನಪ್ರತಿನಿಧಿಗಳು ಪತ್ರಿಕಾ ವಿತರಕರ ದಿನಾಚರಣೆ ದಿವಸ ಒಂದು ಶುಭಾಶಯ ಕೋರುತ್ತಾರೆ. ಆದರೆ ಅಸಂಘಟಿತ ವಲಯವಾದ ವಿತರಕರಿಗಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾ ವಿತರಕರಿಗಾಗಿ ಕಾರ್ಯಕ್ರಮ ರೂಪಿಸುವುದಾಗಿ ಭರವಸೆ ನೀಡಿದರೂ ಸಹ ಅದು ಕಾರ್ಯರೂಪಕ್ಕೆ ಬರಲಿಲ್ಲ. ಪತ್ರಿಕೆಗಳು ನಷ್ಟದ ಹಾದಿ ಹಿಡಿಯುತ್ತಿರುವ, ತನ್ನ ವರದಿಗಾರ ಸಂಬಳವನ್ನೇ ಕಡಿತ ಮಾಡುತ್ತಿರುವ, ಕಚೇರಿಯಲ್ಲಿ ದುಡಿಯುವವರ ಸಂಖ್ಯೆ ಕಡಿಮೆಗೊಳಿಸುತ್ತಿರುವ, ತನ್ನ ಮುದ್ರಿಸುವ ಪ್ರಮಾಣ ಇಳಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಪತ್ರಿಕೆಗಳಿಂದ ಮುಂದೆ ವಿತರಕರ ಬದುಕು ಹಸನಾಗುತ್ತೆ ಅನ್ನೋ ಯಾವ ಭರವಸೆಯೂ ನನಗಂತೂ ಇಲ್ಲ. ಆಳುವ ಸರಕಾರವೇ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೇ.
ಬರಹ: -ಗೌಡಹಳ್ಳಿ ಮಹೇಶ್..
Malathesh Urs. Editor. SUDDIVAANI 9480472030