“ಏಯ್.. ರಾಯ, ಫರಂಗಿಯವರು ಇಡೀ ದೇಶವನ್ನು ತಮ್ಮ
ಮೋಸದಿಂದ ಮಣ್ಣು ಗೂಡಿಸುತ್ತಿದ್ದಾರೆ. ಅಂಥಾದ್ರಲ್ಲಿ ಈ ನಾಡಿಗಾಗಿ ನೀನ್ ಏನ್ ಮಾಡ್ತಿ” ಎಂದು ಕೇಳಿದಳು. ಇದಕ್ಕೆ ಉತ್ತರವಾಗಿ “ಅವ್ವಾ ನೀವು ನಮಗ ತಾಯಿ ಇದ್ದಾಂಗ. ಈ ರಾಯ ನಿಮ್ಮ ಮುಂದೆ ಒಮ್ಮೆ ಮಾತ್ ಕೊಟ್ರೆ ಯಾವತ್ತೂ ಮಾತ್ ತಪ್ಪವ ಅಲ್ಲ. ಒಂದು ವೇಳೆ ನೂರು ತಲೆಗಳನ್ನು ಕಡ್ದು ನಿನ್ ಕಾಲ್ ಬಳಿ ಹಾಕ್ತಿನಿ ಅಂತ ನಾನ್ ಮಾತ್ಕೊಟ್ರೆ 99 ತಲೆಗಳನ್ನು ಕಡ್ದು ಇನ್ನೊಂದು ಕಡಿಮೆ ಬಿದ್ರೆ
ಮಾತು ಉಳಿಸಿಕೊಳ್ಳೋದಕ್ಕಾಗಿ ನೂರನೆ ತಲೆಯಾಗಿ ನನ್ನ
ತಲೆಯನ್ನೇ ಕಡ್ದು ನಿನ್ ಪಾದಕ್ಕೆ ಹಾಕ್ತಿನಿ” ಅಂದುಬಿಟ್ಟನು.
—————————————
ಆಗಸ್ಟ್ 15, ಇಡೀ ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಮಹಾಸಮ್ಮೇಳನದಲ್ಲಿ ಭಾಗವಹಿಸುತ್ತದೆ.
ಆಗಸ್ಟ್ 15 ಎಂದೊಡನೆ ದೇಶದ ಪ್ರಧಾನಿಯಿಂದ ಹಿಡಿದು ನಮ್ಮೂರಿನ ಸಣ್ಣ-ಪುಟ್ಟ ಪುಢಾರಿಗಳವರೆಗೆ
ಉದ್ದುದ್ದ ಭಾಷಣ ಮಾಡುತ್ತ ಗಾಂಧಿ, ನೆಹರೂ, ಭಗತ್ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ
ಹೋರಾಟಗಳನ್ನು ಸ್ಮರಿಸುತ್ತಾರೆ. ಆದರೆ ದೇಶ ದೇವಿಗೆ ತನ್ನ ರಕ್ತದಿಂದ ಅಭಿಷೇಕಗೈದ, ಮಹಾ ಸೇನಾನಿಯಾದ
ಸಂಗೊಳ್ಳಿ ರಾಯಣ್ಣನ ಹೆಸರನ್ನು ಹೇಳದೆ ಮಾತು ಮುಗಿಸಿ ಬಿಡುತ್ತಾರೆ. ಇದು ಅತ್ಯಂತ ದು:ಖಕರ ಸಂಗತಿ.
ಅಸಲಿಗೆ ರಾಯಣ್ಣನ ಹೆಸರನ್ನು ಇಂದಿಗೂ ಜೀವಂತವಾಗಿ ಇಟ್ಟಿರುವುದು ನಮ್ಮ ಜನಪದರು.
ಅವರ ಹಾಡು ಹಸೆಗಳಲ್ಲಿ, ಗೀ-ಗೀ ಪದಗಳಲ್ಲಿ, ಡೊಳ್ಳಿನ ಪದಗಳಲ್ಲಿ ರಾಯಣ್ಣ ಇಂದಿಗೂ ಮಹಾನ್ ಸ್ಫೂರ್ತಿಯ ಸೆಲೆಯಾಗಿದ್ದಾನೆ.
ನಾವು ಹೀಗೆ ಇಡೀ ರಾಜ್ಯ ಸಂಚರಿಸುತ್ತಿರುವಾಗ ಅನೇಕ ಜನಪದ ಕಲಾವಿದರು, ಹಿರಿಯ ಡೊಳ್ಳು ಪದದ
ಕಲಾವಿದರು ರಾಯಣ್ಣನ ಬಗ್ಗೆ ಕಟ್ಟಿದ ಹಾಡು-ಹಸೆಗಳನ್ನು, ಜನಪದ ಕಥೆಗಳನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅದನ್ನು
ನಾನು ನಿಮ್ಮ ಮುಂದಿಡುವ ಕೆಲಸ ಮಾಡುತ್ತಿದ್ದೇನೆ. ಈ ಹೆಸರು ಕೇಳಿದರೆ ಯುವಕರ ಮೈ ಮನಗಳಲ್ಲಿ ಇಂದಿಗೂ ವಿದ್ಯುತ್ ಸಂಚಾರವಾಗುತ್ತದೆ. ಅದಕ್ಕೆ ಕಾರಣ ಅವನಲ್ಲಿರುವಂತಹ ಸ್ವಾತಂತ್ಯ್ರ ಪ್ರೇಮ, ಛಲಬಿಡದ ತ್ರಿವಿಕ್ರಮನಂತೆ ಅವನು ನಡೆಸಿದ ಹೋರಾಟ. ಅವನೇನು ದೊರೆ ಮಗನಲ್ಲ ಅಥವಾ ಭಾರೀ ಶ್ರೀಮಂತನಲ್ಲ. ಸಂಗೊಳ್ಳಿಯ ಗರಡಿಯ ಮನೆಯಲ್ಲಿ ಮಲ್ಲಯುದ್ಧಗಳನ್ನು ಮಾಡುತ್ತ ರಟ್ಟೆಗಳನ್ನು ಗಟ್ಟಿಯಾಗಿಸಿಕೊಂಡು ತನ್ನ ಪರಾಕ್ರಮದ ಮೂಲಕ ಇಡೀ ಊರಿಗೆ ಹೆಸರುವಾಸಿ ಯಾಗಿದ್ದ ದೇಶ ಭಕ್ತ ಯುವಕ. ಅದೊಂದು ದಿನ ‘ಬ್ರಿಟೀಷ್ ಯೂನಿಯನ್ ಜಾಕ್’ ಇಡೀ ದೇಶವನ್ನು ಮುಕ್ಕಿ ನೀರು ಕುಡಿಯುತ್ತಿರುವುದನ್ನು ಕಂಡು ಚೆನ್ನಮ್ಮನ ಸೇನೆಯನ್ನು ಸೇರಲು ತನ್ನೆಲ್ಲಾ ಮಿತ್ರರೊಡಗೂಡಿ ಕಿತ್ತೂರಿನ ಆಸ್ಥಾನಕ್ಕೆ ಬಂದಾಗ ರಾಯಣ್ಣನ ಆ ರಾಜಠೀವಿ, ಅವನ ಉಕ್ಕಿನಂತ ಶರೀರ, ಕಬ್ಬಿಣದಂತ ಮಾಂಸಖಂಡಗಳನ್ನು ಕಂಡು ಮಾತೃಸ್ವರೂಪದ ಕಿತ್ತೂರಿನ ರಾಣಿ “ಹೇ ರಾಯ ಫರಂಗಿಯವರು ಇಡೀ ದೇಶವನ್ನು ತಮ್ಮ ಮೋಸದಿಂದ ಮಣ್ಣು ಗೂಡಿಸುತ್ತಿದ್ದಾರೆ. ಅಂಥಾದ್ರಲ್ಲಿ ಈ ನಾಡಿಗಾಗಿ ನೀನ್ ಏನ್ ಮಾಡ್ತಿ ಎಂದು ಕೇಳಿದಳು. ಇದಕ್ಕೆ ಉತ್ತರವಾಗಿ “ಅವ್ವಾ ನೀವು ನಮಗ ತಾಯಿ ಇದ್ದಾಂಗ. ಈ ರಾಯ ನಿಮ್ಮ ಮುಂದೆ ಒಮ್ಮೆ ಮಾತ್ ಕೊಟ್ರೆ ಯಾವತ್ತೂ ಮಾತ್ ತಪ್ಪವ ಅಲ್ಲ. ಒಂದು ವೇಳೆ ನೂರು ತಲೆಗಳನ್ನು ಕಡ್ದು ನಿನ್ ಕಾಲ್ ಬಳಿ ಹಾಕ್ತಿನಿ ಅಂತ ನಾನ್ ಮಾತ್ಕೊಟ್ರೆ 99 ತಲೆಗಳನ್ನು ಕಡ್ದು ಇನ್ನೊಂದು ಕಡಿಮೆ ಬಿದ್ರೆ ಮಾತು ಉಳಿಸಿಕೊಳ್ಳೋದಕ್ಕಾಗಿ ನೂರನೆ ತಲೆಯಾಗಿ ನನ್ನ ತಲೆಯನ್ನೇ ಕಡ್ದು ನಿನ್ ಪಾದಕ್ಕೆ ಹಾಕ್ತಿನಿ” ಅಂದುಬಿಟ್ಟನು.
ಇದನ್ನು ಕೇಳಿ ಚೆನ್ನಮ್ಮಾಜಿಯು ಸೇರಿದಂತೆ ಇಡೀ ಆಸ್ಥಾನಕ್ಕೆ ರೋಮಾಂಚನವಾಯಿತು. ಹೀಗೆ ಸೇನೆಸೇರಿದ ರಾಯಣ್ಣ ಚೆನ್ನಮ್ಮ ತಾಯಿಗೆ ಸ್ವಂತ ಮಗನಿಗಿಂತ ಹೆಚ್ಚಾದನು.
ಬ್ರಿಟೀಷರಿಗೂ ರಾಯಣ್ಣನ ಸಾಮಥ್ರ್ಯದ ಅರಿವಿತ್ತು ಹೀಗಾಗಿಯೇ “ರಾಯಣ್ಣ ನೀನು ಕಿತ್ತೂರು ಚೆನ್ನಮ್ಮಗೆ ಮೋಸಮಾಡಿ ಬ್ರಿಟೀಷರ ಜೊತೆಗೆ ಕೈ ಜೋಡಿಸಿದ್ದೇ ಆದರೆ ಕಿತ್ತೂರಿನ ಆಸ್ಥಾನದ ಮುಂದಿನ ದೊರೆ ನೀನೆ” ಎಂದು ಆಮಿಷ ಒಡ್ಡಿದರು. ಆದರೆ ಅಪ್ಪಟ ದೇಶಪ್ರೇಮಿಯಾದ ರಾಯಣ್ಣ “ಥೂ…….. ಹಡ್ಸಿ ಮಕ್ಳ್ರ …….. ಕಾಲಿಡಲು ಜಾಗ ಕೊಟ್ರೆ ಕುಲಕೆಡುಸ್ತಿರೇನ್ರೋ. ನಾನ್ ರಾಯಣ್ಣ ಇದೀನಿ, ದೇಶದ್ರೋಹಿ ಅಲ್ಲ. ಹಾಲ್ ಕೆಟ್ರೆ ಕೆಡ್ತದ ಹಾಲ್ಮತದ ಮಂದಿ ನಾವೆಂದೂ ಕೆಡಾಂಗಿಲ್ಲ. ನಾವ್ ದೇಶದ್ರೋಹ ಮಾಡೋದಿಲ್ಲ. ಇನ್ನೊಂದು ಕ್ಷಣ ನನ್ ಮುಂದೆ ನಿಂತೀ ಅಂದ್ರೆ ತಲೆ ಕಡ್ದು ಕಿತ್ತೂರಿಗೆ ತೋರಣ ಕಟ್ತಿನಿ” ಎಂದು ಘರ್ಜಿಸಿದನು.
ಪರಾಕ್ರಮಿಯಾಗಿ ಹೋರಾಡಿ ಬ್ರಿಟೀಷರ ವಿರುದ್ಧ ನಡೆದ ಮೊದಲ ಯುದ್ಧದಲ್ಲಿ ಕಿತ್ತೂರಿಗೆ ಜಯವನ್ನೂ ತಂದ. ಮಾತ್ರವಲ್ಲ ಸೊಕ್ಕಿನಿಂದ ಕಪ್ಪ ಕೇಳಿದ ಬ್ರಿಟಿಷ್ ಥ್ಯಾಕರೆಯ ತಲೆ ಈ ಯುದ್ಧದಲ್ಲೇ ನೆಲಕ್ಕುರುಳಿತು. ಆದರೆ ಸುಲಭಕ್ಕೆ ಪಟ್ಟುಬಿಡದ ಬ್ರಿಟೀಷರು ಮತ್ತೆ ಯುದ್ಧ ಸಾರಿದರು. ಚೆನ್ನಮ್ಮ ಮತ್ತು ರಾಯಣ್ಣನು ಗೆಲುವು ನಮ್ಮದೇ ಎಂದು ಮುನ್ನುಗ್ಗಿದರು. ದುರ್ದೈವ ನೋಡಿ ಇಡೀ ಯುದ್ಧದಲ್ಲಿ ನಮ್ಮವರೇ ಅಧಿಕಾರ ಮತ್ತು ಹಣದ ದಾಹದಿಂದ ಕಿತ್ತೂರಿನ ಕತ್ತು ಕೊಯ್ದರು. ಕಿತ್ತೂರು ಯುದ್ಧದಲ್ಲಿ ಸೋತು ತಾಯಿ ಚೆನ್ನಮ್ಮರ ಬಂಧನವಾಯ್ತು. ಕಿತ್ತೂರಿನ ಸ್ವಾತಂತ್ರ್ಯದ ಕನಸು ಕಮರಿ ಹೋಯ್ತು. ಆದರೆ ಚೆನ್ನಮ್ಮ ಮಾತ್ರ ರಾಯ ಬರ್ತಾನೆ ನನ್ನ ರಾಯ ಬರ್ತಾನೆ. ಕಿತ್ತೂರಿನ ನಂದಿ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸ್ತಾನೆ. ಫರಂಗಿಯವರ ಧ್ವಜವನ್ನು ಮಣ್ಣುಗೂಡಿಸುತ್ತಾನೆ. ಎಂದು ಕನಸು ಕಾಣುತ್ತಿದ್ದರು. ಈ ಕನಸಿನ ಸಾಕಾರಕ್ಕಾಗಿ ಸಂಗೊಳ್ಳಿ ರಾಯಣ್ಣನಿಗೆ ಅಪಾರವಾದ ಜನ ಬೆಂಬಲ, ಧನಬೆಂಬಲ, ಆಯುಧ ಹಾಗೂ ಸೇನಾಪಡೆಯ ಅವಶ್ಯಕತೆ ಇತ್ತು. ಆದರೆ ಸಂಗೊಳ್ಳಿ ರಾಯಣ್ಣ ತನ್ನಲ್ಲಿದ್ದ ಛಲ ಮತ್ತು ದೇಶಪ್ರೇಮದಿಂದ ಮಹಾಸೇನೆಯನ್ನು ಸಂಘಟಿಸಿದ. ಗೆರಿಲ್ಲಾ ಯುದ್ಧ ತಂತ್ರದಿಂದ ಬ್ರಿಟೀಷರನ್ನು ಹಣಿಯತೊಡಗಿದ. ಇದಕ್ಕಾಗಿ ಜನರ ಬಳಿಯೇ ಹಣಕ್ಕಾಗಿ ಕೈ ಚಾಚಿದ. ರಾತ್ರಿ ಹೊತ್ತಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸಿ, ಕಿತ್ತೂರಿನ ಪ್ರಜೆಗಳ ಮುಂದೆ ನಿಂತು ತನ್ನೊಳಗಣ ಬೆಂಕಿಯನ್ನು ಅವರ ಹೃದಯಕ್ಕೂ ಹಸ್ತಾಂತರಿಸಿದ.
“ಕಿತ್ತೂರಿನ ತಾಯಿ ಜೈಲು ಸೇರಿದ್ದಾಳೆ. ಅವಳ ಸ್ವಾತಂತ್ರ್ಯದ ಕನಸಿನ ಸಾಕಾರಕ್ಕಾಗಿ ನಾನು ಬೀದಿಗಿಳಿದಿದ್ದೇನೆ. ನನ್ನೊಂದಿಗೆ ಹೋರಾಡಲು ಯುವಕರು ಬೇಕಿದ್ದಾರೆ. ಲಡಾಯಿ ಮಾಡಲು ದೇಶಭಕ್ತರು ಬೇಕಿದ್ದಾರೆ. ಆದರೆ ಅವರ ಹೊಟ್ಟೆ ತುಂಬಿಸಲು ನನ್ನಲ್ಲಿ ಹಣವಿಲ್ಲ. ಅವ್ವಾ……! ನಿಮ್ಮ ಮನೆಯಲ್ಲಿರುವ ರೊಟ್ಟಿ-ಪಲ್ಯ, ದವಸ-ಧಾನ್ಯ, ಸ್ವಲ್ಪ ಹಣಕೊಟ್ಟು ಸಹಾಯ ಮಾಡ್ರವಾ…..” ಎಂದು ಅಂಗಲಾಚಿದ್ದನ್ನು ಕಂಡು ಕಿತ್ತೂರಿನ ದೇಶಭಕ್ತ ತಾಯಂದಿರು ದವಸ-ಧಾನ್ಯ ಅಲ್ಲದೆ ಮಾಂಗಲ್ಯ ಸರವನ್ನೇ ಕೊಟ್ಟರು. ಒಬ್ಬ ತಾಯಿ “ಹೇ ರಾಯ ಲಡಾಯಿ ಮಾಡಾಕ ನನ್ನ ಮಗನ್ನೇ ಕೊಡ್ತೀನೋ ನಿಂಗ”É ಎಂದು ತನ್ನ ಮಗನನ್ನೇ ಕರೆತಂದಳು. ರಾಯಣ್ಣ ಆನಂದದಿಂದ ಬರಸೆಳೆದು ಅಪ್ಪಿಕೊಂಡು ಅವನ ಮುಖ ನೋಡ್ತಾನೆ ಆಗಲೇ ಇವನಿಗೆ ತಿಳಿದದ್ದು ಆಕೆಯ ಮಗ ಕುರುಡ ಎಂದು. ಇದ ಕಂಡು ರಾಯಣ್ಣ
ಕೇಳ್ತಾನೆ. “ಅವ್ವಾ…..! ಶೂರ್ ಮಗನ್ನ ಕೊಡ್ತೀ ಅಂದ್ರಾ ಯಾವ್ದೋ ಕುರುಡು ಮಗನ್ನ ಕೊಟ್ಟಿದಿಯಲ್ಲವ್ವಾ….. ನಾನ್ಯಾವ್ ಲಡಾಯಿ ಮಾಡ್ಲಿ. ನಾನ್ಯಾವ್ ಕ್ರಾಂತಿ ಮಾಡ್ಲಿ. ಏನ್ ಆಗ್ತದ ಇವ್ನ್ ಕೈಲಿ” ಎಂದ. ಇದ ಕೇಳಿ ಕಿಚ್ಚಿನಿಂದ ತಾಯಿ ಹೇಳ್ತಳೇ “ಹೇ…. ರಾಯ ನನ್ ಮಗ ಕುರುಡ ಅಂತೇಳಿ ಉದಾಸೀನ ಮಾಡ್ಬೇಡ. ಅವನೆದೆಯಲ್ಲಿ ದೇಶಭಕ್ತಿಯ ಕಿಚ್ಚದ. ನನ್ನೆದೆಯಾಗಿನ ದೇಶಭಕ್ತಿಯ ಹಾಲುಣಿಸಿದಿನಿ ಅವಂಗೆ. ಅವನ ಕೈಲಿ ಖಡ್ಗ ಹಿಡ್ದು ಬ್ರಿಟಿಷರ ವಿರುದ್ಧ ಸೆಣ್ಸಕಾಗ್ದಿದ್ರು ದೇಶದ್ರೋಹಿಗಳು ನಿನ್ನದೆಗೆ ಗುಂಡು ಹಾರಿಸ್ತಾರ ಅನ್ನೋದ್ ಗೊತ್ತಾದ್ರ ನನ್ ಮಗ ಅಡ್ಡ ನಿಲ್ತಾನೋ. ನಿನ್ ಎದೆಗೆ ಬೀಳೋ ಗುಂಡುನ ನನ್ ಮಗ ತಿಂದು, ದೇಶಕ್ಕಾಗಿ ಪ್ರಾಣ ಕೊಟ್ಟು ರಾಯಣ್ಣ ಚಿರಾಯುವಾಗ್ಲಿ, ಕಿತ್ತೂರು ಸ್ವತಂತ್ರವಾಗ್ಲಿ ಎಂದು ಬಲಿದಾನ ಮಾಡ್ತಾನೋ ಇಂಥ ಮಗನ್ನ ಕುರುಡ ಅಂತಿಯಾ? ಕರ್ಕೊಂಡೋಗೋ ಇವನನ್ನ” ಎಂದು ತನಗಿರುವ ಒಬ್ಬನೇ ಮಗನನ್ನ ಧಾರೆ ಎರೆದಳು.
ಹೀಗೆ ಕಟ್ಟದ ಬೃಹತ್ ಸೇನೆ ಜನರಿಂದಲೇ ಬೆಳೆದು ಬೃಹದಾಕಾರ ತಾಳಿದ ಸೇನೆಯ ನಾಯಕನಾಗಿ ರಾಯಣ್ಣ ತನ್ನ ಕ್ರಾಂತಿಯನ್ನು ಮುಂದುವರೆಸುತ್ತಾನೆ. ಚೆನ್ನಮ್ಮ ತಾಯಿ ಇಟ್ಟ ನಂಬಿಕೆ ಸುಳ್ಳಾಗಲಿಲ್ಲ. ರಾಯಣ್ಣನ ಹೋರಾಟದ ಸುದ್ದಿಗಳು ಚೆನ್ನಮ್ಮನಿಗೂ ತಲುಪುತ್ತಿದ್ದವು. ಈ ತಾಯಿ ಮಗನ ಪ್ರೀತಿ ಎಂಥಾದಿದ್ದಿರಬೇಕು ? ನೀವೇ ಊಹಿಸಿ. ಗಂಡ ಸತ್ತರೂ ಕಣ್ಣೀರಿಡದ ಚೆನ್ನಮ್ಮ ತಾನೇ ಸಾಮ್ರಾಜ್ಯದ ಸೂತ್ರ ಹಿಡಿದ ಗಟ್ಟಿಗಿತ್ತಿ. ಮಾಂಗಲ್ಯ ಕಳೆದುಕೊಂಡರೂ ಕಣ್ಣೀರಿಡದಾಕೆ, ಮಗನ್ನು ಕಳೆದುಕೊಂಡರೂ ಕಣ್ಣೀರಿಡದಾಕೆ, ಯುದ್ಧದಲ್ಲಿ ಸೋತು ಜೈಲು ಪಾಲಾದಾಗ ಕಣ್ಣೀರಿಡದಾಕೆ ಬ್ರಿಟಿಷರ ಸಂಚಿಗೆ ಬಲಿಯಾದಳು. ಬ್ರಟೀಷರ “ಚೆನ್ನಮ್ಮ ನಿನ್ನ ರಾಯ ಇನ್ನು ಬರಲ್ಲ. ನಿನ್ನ ರಾಯನನ್ನು ನಾವು ಕೊಂದು ಬಿಟ್ಟೆವು” ಎಂಬ ಸುಳ್ಳು ಸುದ್ದಿಯನ್ನು ಕೇಳಿ “ನನ್ನ ರಾಯನಿಲ್ಲದ ಭೂಮಿಯಲ್ಲಿ ನಾನು ಒಂದು ಕ್ಷಣವೂ ಇರುವುದಿಲ್ಲ” ಎಂದು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾರೆ. ಸಂಗೊಳ್ಳಿ ರಾಯಣ್ಣನ ಪಾಲಿಗೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸುತ್ತದೆ. ಕಣ್ಣೀರಿಡುತ್ತಲೆ ರಾಯಣ್ಣ ಹೋರಾಟ ಮುಂದುವರೆಸಿದ. ಆದರೆ ನಮ್ಮವರೆ ಮಾಡಿದ ಮೋಸಕ್ಕೆ ಬಲಿಯಾಗಿ ಸಂಗೊಳ್ಳಿ ರಾಯಣ್ಣ ಬ್ರಿಟೀಷರ ಕೈಗೆ ಸಿಕ್ಕಿಬಿದ್ದ. ಇಂಥ ದೇಶದ್ರೋಹಿಗಳು ನಮಕ್ ಹರಾಮ್ಗಳು. ಅನ್ನವನ್ನೇ ಉಂಡು ವಿಷ ಕಕ್ಕುವ ಪಾಪಿಗಳು. ರಾಯಣ್ಣನ ಸ್ವಾತಂತ್ರ್ಯದ ಕನಸನ್ನು ಚಿವುಟುತ್ತಾರೆ. ರಾಯಣ್ಣ ಹೆಚ್ಚು ಕಾಲ ಬದುಕಿರುವುದು ಸರಿಯಲ್ಲ. ಎಂದು ಬ್ರಿಟೀಷ್ ಸರ್ಕಾರದ ಮೇಲೆ ಹೊತ್ತಡವನ್ನು ತರುತ್ತಾರೆ. ರಾಯಣ್ಣನನ್ನು ಗಲ್ಲಿಗೇರಿಸುವ ದಿನ ಬ್ರಿಟೀಷ್ ಅಧಿಕಾರಿಯೊಬ್ಬ ನಕ್ಕನಂತೆ. “ಹೇ….. ರಾಯ ಯಾವಾಗ್ ನೋಡಿದ್ರು ಲಡಾಯ್ ಮಾಡ್ತಿನಿ ಸ್ವಾತಂತ್ರ್ಯ ತರ್ತಿನಿ ಅಂತಿದ್ಯಲ್ಲೋ. ನೀನ್ ಸತ್ ಮ್ಯಾಲೆ ಯಾರ್ ಲಡಾಯಿ ಮಾಡ್ತಾರೆ. ನೀನ್ ಸತ್ ಮ್ಯಾಲೆ ಯಾರ್ ಸ್ವಾತಂತ್ರ್ಯ ತರ್ತಾರೆ” ಎಂದು ಗಹಗಹಿಸಿ ನಕ್ಕನಂತೆ. ಅದ ಕಂಡು ರಾಯಣ್ಣ “ಛೀ……. ಕೆಂಪು ಮೂತಿಯ ಕೋತಿ ಒಬ್ಬ ರಾಯ ಸತ್ರೆ ಲಢಾಯಿ ನಿಲ್ಲುತ್ತೇನೋ ನಮ್ ನಾಡಿನೊಳ್ಗ ಎಲ್ಲಿವರ್ಗೂ ತಾಯಿ ಹಡಿತಾಳೋ ಅಲ್ಲಿವರ್ಗೂ ಮನೆ ಮನೆಯಲ್ಲೂ ರಾಯಣ್ಣನಂಥ ಮಕ್ಕಳು ಹುಟ್ತಾರೆ. ನಿಮ್ಮಂಥ ದೇಶದ್ರೋಹಿಗಳನ್ನು ಮೆಟ್ಟಲ್ಲಿ ಹೊಡೆದು ದೇಶ ಬಿಡಿಸ್ತಾರೆ. ನಟ್ಟ ನಡುರಾತ್ರಿ ನೀವೆಲ್ಲಾ ದೇಶಬಿಟ್ಟು ಓಡಿಹೋಗುವ ಸಮಯ ಬಂದೇ ಬರುತ್ತೆ” ಎಂದು ಘರ್ಜಿಸುತ್ತ “ಕಿತ್ತೂರಿನ ಸ್ವಾತಂತ್ರ್ಯಕ್ಕೆ ಜಯವಾಗ್ಲಿ ಚೆನ್ನಮ್ಮಾಜಿಗೆ ಜಯವಾಗ್ಲಿ” ಎಂದು ಗಲ್ಲಿಗೇರಿದ.
ಆದರೆ ವಿಪರ್ಯಾಸ ನೋಡಿ. ಅವನು ಗಲ್ಲಿಗೇರಿದ ಹತ್ತೇ ನಿಮಿಷದಲ್ಲಿ ಇಂಗ್ಲೆಂಡ್ ರಾಣಿಯ ಕಡೆಯಿಂದ ಒಂದು ಪತ್ರ ಬಂದಿತು. ಸಂಗೊಳ್ಳಿ ರಾಯಣ್ಣನಂಥ ದೇಶಪ್ರೇಮಿಯನ್ನು ಗಲ್ಲಿಗೇರಿಸುವುದು ಮಹಾಪರಾಧವಾಗುತ್ತದೆ. ರಾಯಣ್ಣನನ್ನು ಬಂಧನದಲ್ಲಿಡಿ ಎಂದು ಧಾರಾವಾಡದ ಕಲೆಕ್ಟರ್ಗೆ ಸುದ್ದಿ ಬಂತಂತೆ. ಒಂದುವೇಳೆ ಈ ಪತ್ರ 10 ನಿಮಿಷ ಮುಂಚೆ ಬಂದಿದ್ದರೆ ಸಂಗೊಳ್ಳಿ ರಾಯಣ್ಣನ ಜೀವ ಉಳಿಯುತ್ತಿತ್ತು. ಇದು ನಮ್ಮ ದೇಶದಲ್ಲಿ ನಡೆದ ಘನ ಘೋರ ಅಚಾತುರ್ಯವಲ್ಲದೇ ಮತ್ತೇನು? ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರ ಇಂಥ ದೇಶಭಕ್ತನನ್ನು ಗಲ್ಲಿಗೇರಿಸಿದ ದುಃಖಕ್ಕೋ ಏನೋ ಮರ ದಿನಗಳೆದಂತೆ ಸಂಪೂರ್ಣ ಒಣಗಿತು. ಆದರೆ ಅದರ ಬಿಳಿಲುಗಳಿಂದ ಬೆಳೆದ ಮರ ಇನ್ನೂ ಜೀವಂತವಾಗಿದ್ದು, “ಇಲ್ಲೇ ನೋಡಿ ಆ ದೇಶಪ್ರೇಮಿಯನ್ನು ಗಲ್ಲಿಗೇರಿಸಿದ್ದು” ಎಂದು ರಾಯಣ್ಣನ ಅಂತ್ಯದ ಕಥೆ ಹೇಳುತ್ತದೆ. ರಾಯಣ್ಣ ಸತ್ತ ಸುದ್ದಿ ಕೇಳಿದ ಎಷ್ಟೋ ಜನ ಆತ್ಮೀಯರು ದುಃಖ ತಪ್ತರಾಗಿ ಊರು ಬಿಡುತ್ತಾರೆ. ಸಿದ್ಧಿ ಜನಾಂಗಕ್ಕೆ ಸೇರಿದ ಒಬ್ಬ ಗೆಳೆಯನಂತೂ “ರಾಯ…..! ನಿನ್ನನ್ನು ಈ ಪಾಪಿಗಳು ಹೇಗ್ ಕೊಂದ್ರೋಯಪ್ಪಾ….., ನೀನಿಲ್ಲದ ಮ್ಯಾಗೆ ಈ ಭೂಮಿ ನನ್ನ ಪಾಲಿಗೆ ನರಕ. ನಾನೂ ನಿನ್ ಜೊತೆ ಬರ್ತಿನಿ ಇರು” ಎಂದು ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಪ್ರಾಣ ಬಿಡುತ್ತಾನೆ. ಈ ಘಟನೆಯಾಗಿ ಕೆಲ ದಿನಗಳವರೆಗೆ ಇಡೀ ಕಿತ್ತೂರಿನಲ್ಲಿ ಯಾರೂ ಸಹ ಮನೆಗಳಲ್ಲಿ ಒಲೆಯನ್ನೇ ಹಚ್ಚುವುದಿಲ್ಲ. ತೊಟ್ಟಿಲಲ್ಲಿ ಹಸಿವಿನಿಂದ ಕಣ್ಣೀರಿಡುತ್ತಿದ್ದ ಮಕ್ಕಳಿಗೆ ತಾಯಂದಿರು ರಾಯಣ್ಣನನ್ನು ಕಳೆದುಕೊಂಡ ದುಃಖದಿಂದ ತಮ್ಮೆದೆಯ ಹಾಲನ್ನು ಉಣಿಸಲಿಲ್ಲ.
ಆದರೆ ದೈವೇಚ್ಛೆ ನೋಡಿ ರಾಯಣ್ಣನ ದೇಶಪ್ರೇಮಕ್ಕೆ ದೇವರೂ ಕೂಡ ಮೆಚ್ಚಿದ್ದಾನೆ.
ನಮ್ಮವರೇ ರಾಯಣ್ಣನಿಗೆ ಮೋಸ ಮಾಡಿರಬಹುದು. ಆದರೆ ದೇವರು ಶಾಶ್ವತವಾದುದ್ದನ್ನು ರಾಯಣ್ಣನಿಗೆ ಕರುಣಿಸಿದ್ದಾನೆ.
ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಆಗಸ್ಟ್ 15 ನೇ ತಾರೀಖು “ಸ್ವಾತಂತ್ರ್ಯೋತ್ಸವ”
ಬ್ರಿಟೀಷರು ಗಲ್ಲಿಗೇರಿಸಿದ ದಿನ ಜನವರಿ 26 ನೇ ತಾರೀಖು. “ಗಣರಾಜ್ಯೋತ್ಸವ”
ರಾಯಣ್ಣ ಹುಟ್ಟಿದರೆ ಸ್ವಾತಂತ್ರ್ಯೋತ್ಸವ ರಾಯಣ್ಣ ಗಲ್ಲಿಗೇರಿದ ದಿನವೇ ಗಣ ರಾಜ್ಯೋತ್ಸವ. ಇಂಥಹ ರಾಯಣ್ಣನನ್ನು
ರಾಜಕಾರಣಿಗಳು ಮರೆತರೇನಂತೆ ದೇಶಾಭಿಮಾನಿಗಳು ರಾಯಣ್ಣನನ್ನು ನೆನೆಯೋಣ.
ಸ್ವಾತಂತ್ರ್ಯೋತ್ಸವದೊಂದಿಗೆ ರಾಯಣ್ಣೋತ್ಸವವನ್ನೂ ಆಚರಿಸೋಣ.
“ಮಹಾರಾಷ್ಟ್ರ ಎಂದರೆ ಶಿವಾಜಿ ನೆನಪಾಗುತ್ತಾರೆ
ಪಂಜಾಬ್ ಎಂದರೆ ಭಗತ್ಸಿಂಗ್ ನೆನಪಾಗುತ್ತಾರೆ
ಬಂಗಾಳ ಎಂದರೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ.
ಕರ್ನಾಟಕವನ್ನು ನೆನೆದಾಗ ರಾಯಣ್ಣನ ನೆನಪಾಗುವಂತಾಗಲಿ.
ಮನೆಮನೆಗಳಲ್ಲಿ ಮನಮನಗಳಲ್ಲಿ ರಾಯಣ್ಣ ಮತ್ತೆ ಹುಟ್ಟಿ ಬರಲಿ”
ಎಂದು ಆಶಿಸೋಣ.
ಬರಹ:- ನಿಕೇತರಾಜ್ ಮೌರ್ಯ.
ಮಾಲತೇಶ್ ಅರಸ್. ಸಂಪಾದಕರು, ಸುದ್ದಿವಾಣಿ.