ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ (61). ಅವರು ಹೃದಯಾಘಾತದಿಂದ ವಿಧಿವಶರಾದರು. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಸರಳ, ಸಜ್ಜನ ರಾಜಕಾರಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೃದಯಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ರಕ್ತ ವಾಂತಿ ಮಾಡಿಕೊಂಡಿದ್ದು, ಈ ವೇಳೆ ಉಸಿರು ತೆಗೆದುಕೊಳ್ಳಲು ಆಗಲಿಲ್ಲ. ಶ್ವಾಸಕೋಶದಲ್ಲಿ ರಕ್ತ ಸೇರಿದ್ದರಿಂದ ಉಸಿರಾಟದ ಸಮಸ್ಯೆಯಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸುವ ಯತ್ನ ನಡೆಯಿತಾದರೂ ಬದುಕುಳಿಯಲಿಲ್ಲ.
1983ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕೃಷಿಕನಾಗಿಯೂ ಸೈ ಎನಿಸಿಕೊಂಡಿದ್ದ ಧ್ರುವನಾರಾಯಣ್ ಕಾಂಗ್ರೆಸ್ ಬಲಿಷ್ಠಗೊಳಿಸುವಲ್ಲಿ ಪ್ರಮುಖ ವಹಿಸಿದ ನಾಯಕರಾಗಿದ್ದರು. ಏನೇ ಮಾತನಾಡಿದರೂ ಸ್ಪಷ್ಟವಾಗಿ ಮಾತನಾಡುವ ಛಾತಿ ಹೊಂದಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದ ಅವರು, ಜನಸೇವೆ ಮೂಲಕ ಪ್ರತಿಯೊಬ್ಬರ ಮನ ಗೆದ್ದಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಹಾಗೂ ಸಂತೇಮರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಚಾಮರಾಜನಗರ ಸಂಸದರಾಗಿಯೂ ಗೆಲುವು ಸಾಧಿಸಿದ್ದರು.
ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದ ಧ್ರುವನಾರಾಯಣ್ ಸಜ್ಜನ ರಾಜಕಾರಣಿ ಅಂತಾನೇ ಪ್ರಖ್ಯಾತಿ ಪಡೆದಿದ್ದರು. ಅಧಿಕಾರ ಇರಲಿ, ಬಿಡಲಿ ಒಂದೇ ರೀತಿಯಲ್ಲಿ ಇದ್ದಂಥ ನಾಯಕ. ಚುನಾವಣೆಯಲ್ಲಿ ಸೋತರೂ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು.
ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ನಾಯಕನನ್ನು ನೆನೆದು ಅಭಿಮಾನಿಗಳು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬಿಕ್ಕಿ ಬಿಕ್ಕಿ ಅತ್ತರು. ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.
2004 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 1 ಮತಗಳಿಂದ ಕೊಳ್ಳೆಗಾಲದಿಂದ ಗೆದ್ದು ಬಂದಿದ್ದರು. ಈ ಮೂಲಕ ರಾಜ್ಯದಲ್ಲಿ ಹೆಸರು ಗಳಿಸಿದ್ದರು.
ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಫೋನ್ ಮಾಡಿದ್ದಾರೆ. ಆತ ಬಂದಿದ್ದಾನೆ. 6.40ಕ್ಕೆ ಕಾರಿನಲ್ಲಿ ಹೋಗುವಾಗ ಹೃದಯಘಾತಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಉಸಿರು ನಿಲ್ಲಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಶಾಸಕ ಜಿ. ಟಿ. ದೇವೇಗೌಡ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. ಇಂದು ನಡೆಯಬೇಕಿದ್ದ ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿಗಳು ರದ್ದಾಗಿವೆ. ರಣದೀಪ್ ಸುರ್ಜೇವಾಲ, ಪ್ರಿಯಾಂಕ ಖರ್ಗೆ ಅವರು ಕರೆ ನೀಡಿದ್ದ ಪತ್ರಿಕಾಗೋಷ್ಠಿಯನ್ನು ಕ್ಯಾನ್ಸಲ್ ಮಾಡಲಾಗಿದೆ.
ಮಾಲತೇಶ್ ಅರಸ್ ಹರ್ತಿಕೋಟೆ. ನ್ಯೂಸ್ ಎಡಿಟರ್