“ದಲಿತ ಸಿಎಂ” ಬಿಸಿಬಿಸಿ ಚರ್ಚೆ  :  ನಾ ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ 

Bangalore Editorial
 ನಾ ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ
ಮಾಲತೇಶ್ ಅರಸ್
ಬೆಂಗಳೂರು: ಕಾಂಗ್ರೆಸ್, ಕಾಂಗ್ರೆಸ್, ಕಾಂಗ್ರೆಸ್ ಅಂತ ಕಾರ್ಯಕರ್ತರು ಜಪ ಮಾಡುತ್ತಿರುವ ಸಮಯದಲ್ಲಿ . ನಾ ಸಿಎಂ, ನಾನು  ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ ಎಂಬ ಘೋಷಣೆಗಳು ಜೋರಾಗಿಯೇ ಸದ್ದಾಗುತ್ತಿವೆ.
ಅತ್ತ ಸಿದ್ದರಾಮೋತ್ಸವದ ಜಾತ್ರೆ ಇತ್ತ 75ನೇಸ್ವಾತಂತ್ರ್ಯೋತ್ಸವ ಯಾತ್ರೆ ನಡುವೆ ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಗಾದಿ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ಶಾಸಕ ಜಿ. ಪರಮೇಶ್ವರ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸದಾಶಿವನಗರದಲ್ಲಿರುವ ಖರ್ಗೆ ಅವರು ನಿವಾಸದಲ್ಲಿ ಉಭಯ ನಾಯಕರು ಭಾನುವಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು. ಖರ್ಗೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ. ಖರ್ಗೆ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಬಾಗಿಲು ಹಾಕಿಕೊಂಡು ಇಬ್ಬರೂ ಮಾತುಕತೆ ನಡೆಸಿದ್ದಾರೆ.
 ಹೈಕಮಾಂಡ್‌ ದೆಹಲಿಯಲ್ಲಿದೆ:
ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ನಮ್ಮ ಹೈಕಮಾಂಡ್ ವಿಜಯಪುರ, ಬೆಳಗಾವಿ, ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ಇಲ್ಲ. ಅದು ದೆಹಲಿಯಲ್ಲಿದೆ’ ಎಂದರು.
‘ನೀವು ಮುಖ್ಯಮಂತ್ರಿ ಆಕಾಂಕ್ಷಿಯಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾನು ಮುಖ್ಯಮಂತ್ರಿ ಆಗುವುದನ್ನು ಹೈಕಮಾಂಡ್‌ ಕೇಳಿಕೊಂಡು ಬಂದು ಹೇಳಬೇಕಷ್ಟೇ’ ಎಂದರು.
ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಹುಟ್ಟುಹಬ್ಬಕ್ಕೆ ಶುಭ ಕೋರಲು ಹಿತೈಷಿಗಳು, ಅಭಿಮಾನಿಗಳು ಮನೆಗೆ ಬಂದಿದ್ದಾರೆ‘ ಎಂದೂ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ‘ಬಿಜೆಪಿ ಮೊನ್ನೆ ಹುಟ್ಟಿರುವ ಪಕ್ಷ. ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕೆಂಬುದು ನಮ್ಮ ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ. ನಮ್ಮ ಪಕ್ಷದ ಬಗ್ಗೆ ಬಿಜೆಪಿಯವರಿಗೆ ಚಿಂತೆ ಯಾಕೆ? ಅವರ ಪಕ್ಷದಲ್ಲಿ ಶಿಸ್ತು ಇದೆಯಾ? ಶಿಸ್ತು, ನೀತಿ, ನಿಯಮ ಇವರನ್ನು ನೋಡಿ ಕಲಿಯಬೇಕಾ? ಆರೇಳು ರಾಜ್ಯದಲ್ಲಿ ಜನರು ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟರೂ ಶಾಸಕರನ್ನು ಖರೀದಿಸಿ ಅವರೇ ಸರ್ಕಾರ ಮಾಡುತ್ತಾರೆ. ಇಂಥವರಿಂದ ನಾವು ಪಾಠ ಕಲಿಯಬೇಕೇ’ ಎಂದು ಪ್ರಶ್ನಿಸಿದರು.
ಜಿ. ಪರಮೇಶ್ವರ ಮಾತನಾಡಿ ‘ಖರ್ಗೆ ಅವರು ರಾಜಕಾರಣ ಹೊರತುಪಡಿಸಿ ನನಗೆ ಹಿರಿಯರು. ನಮ್ಮ ತಂದೆಗೆ ಅವರ ಜೊತೆ ಒಡನಾಟ ಇತ್ತು. ಒಂದೇ ಕುಟುಂಬದವರಂತೆ ಇದ್ದೇವೆ. ಎಂಬತ್ತನೇ ವರ್ಷದ ಹುಟ್ಟುಹಬ್ಬದ ಕಾರಣ ಶುಭ ಕೋರಲು ಬಂದಿದ್ದೆ. ಅದರ ಹೊರತಾಗಿ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ’ ಎಂದರು.
ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಮುಖ್ಯಮಂತ್ರಿ ಗಾದಿ ಗುದ್ದಾಟಕ್ಕೆ ಬೇಸರ ವ್ಯಕ್ತಪಡಿಸಿದ ಪರಮೇಶ್ವರ, ‘ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. 113 ಸ್ಥಾನಗಳು ಬಂದ ನಂತರ ಮುಖ್ಯಮಂತ್ರಿ ಸ್ಥಾನ ಯೋಚನೆ ಮಾಡಬೇಕು. ಅಷ್ಟಕ್ಕೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ. ಪಕ್ಷಕ್ಕೆ ಬಹುಮತ ಬಂದ ಬಳಿಕ ಕೇಂದ್ರದಿಂದ ರಾಜ್ಯಕ್ಕೆ ವೀಕ್ಷಕರನ್ನು ಹೈಕಮಾಂಡ್ ಕಳುಹಿಸಲಿದೆ. ಬಳಿಕ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಅದಾದ ಬಳಿಕ ಹೈಕಮಾಂಡ್‌ಗೆ ಮಾಹಿತಿ. ಆ ನಂತರವಷ್ಟೇ ಸಿಎಂ ಆಯ್ಕೆ ನಡೆಯುವುದು ವಾಡಿಕೆ’ ಎಂದರು.
‘ಮುಖ್ಯಮಂತ್ರಿ ಬಗ್ಗೆ ಈಗಲೇ ಯಾರೇ ಚರ್ಚಿಸಿದರೂ ಉಪಯೋಗವಿಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ. ಆ ಮೇಲೆ ಮುಖ್ಯಮಂತ್ರಿ ಬಗ್ಗೆ ಮಾತನ್ನಾಡೋಣ ಎಂದು ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ಒಮ್ಮತದಿಂದ ಇರಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶ ನೀಡಬಾರದು’ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸ್ಥಾನದ ಚರ್ಚೆ ಬೇಡ: ಸಿದ್ದರಾಮಯ್ಯ.
ಮೈಸೂರು: ‘ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಈಗ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಭಿಮಾನಿಗಳು ಸೇರಿದಂತೆ ಯಾರು ಏನೇ ಹೇಳಿದರೂ ಕೊನೆಯದಾಗಿ ನಿರ್ಧರಿಸುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್’ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಮುಖ್ಯಮಂತ್ರಿ ಗಾದಿ ಗುದ್ದಾಟಕ್ಕೆ ಬೇಸರ ವ್ಯಕ್ತಪಡಿಸಿದ ಪರಮೇಶ್ವರ, ‘ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. 113 ಸ್ಥಾನಗಳು ಬಂದ ನಂತರ ಮುಖ್ಯಮಂತ್ರಿ ಸ್ಥಾನ ಯೋಚನೆ ಮಾಡಬೇಕು. ಅಷ್ಟಕ್ಕೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ.
ಜಿ.ಪರಮೇಶ್ವರ್. ಮಾಜಿ ಡಿಸಿಎಂ
ಒಕ್ಕಲಿಗ ಸಮುದಾಯದ ಓಲೈಕೆ ತಪ್ಪೇನಿಲ್ಲ..
ಡಿ.ಕೆ. ಶಿವಕುಮಾರ್‌ ಅವರಿಂದ ಒಕ್ಕಲಿಗ ಸಮುದಾಯದ ಓಲೈಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಒಕ್ಕಲಿಗ ಸಮುದಾಯದ ಓಲೈಕೆ ತಪ್ಪೇನಿಲ್ಲ. ಸಮುದಾಯದ ಮುಂದೆ ಕೇಳಬಾರದು ಎನ್ನಲು ಆಗುತ್ತಾ? ಆ ಸಮುದಾಯ ಆಸೆಪಟ್ಟರೆ ಬೇಡ ಎಂದು ಹೇಳಲು ನಾವು ಯಾರು? ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಹೋಗಲಿದೆ. ಒಟ್ಟಿಗೆ ಹೋಗವ ಇಚ್ಛಾಶಕ್ತಿ ಎಲ್ಲರಲ್ಲೂ ಇರಬೇಕು‘ ‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ‘ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ, ’ಕೆಪಿಸಿಸಿ ಅಧ್ಯಕ್ಷರಾಗಿ ಅವರು ಆ ಮಾತು ಹೇಳಲೇಬೇಕು. ನಾನು ಕೂಡ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಈ ಸಂದರ್ಭದಲ್ಲಿ ನಾನು ಅಷ್ಟು ಕಟುವಾಗಿ ಹೇಳದೇ ಇರಬಹುದು. ಆದರೂ ನನ್ನದೇ ಆದ ರೀತಿಯಲ್ಲಿ ಪಕ್ಷದ ಕೆಲಸ ಮಾಡಿ ಎನ್ನುತ್ತಿದ್ದೆ. ಅದರಲ್ಲಿ ತಪ್ಪೇನೂ ಇಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕೂ ಮೊದಲೇ ಸಿಎಂ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ’ ಎಂದು ಪರಮೇಶ್ವರ್ ಹೇಳಿದರು.
ಮಾಲತೇಶ್ ಅರಸ್ ಹರ್ತಿಕೋಟೆ. ನ್ಯೂಸ್ ಎಡಿಟರ್. ಸುದ್ದಿವಾಣಿ. ಸಂಪಾದಕರು. ಈ ನಗರವಾಣಿ ದಿನಪತ್ರಿಕೆ

Leave a Reply

Your email address will not be published. Required fields are marked *