ಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳಿಗೆ ಅವಹೇಳನ: ಕರ್ನಾಟಕ ಬುಡಕಟ್ಟು ಪರಿಷತ್ತು ಆಕ್ರೋಶ

Chitradurga

ಬೆಂಗಳೂರು: ಜೂ. 04: ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡುಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದೆ.  ರಾಮನಗರ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದ್ದು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ದೂರು ಸ್ವೀಕರಿಸಿರುವ ರಾಮನಗರ ಪೊಲೀಸ್ ಅಧೀಕ್ಷಕರು ಸದರಿ ವಿಚಾರದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಹಾಗೂ ಇತರ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್ ಸೆಲ್ವಕುಮಾರ್‌ರವರಿಗೆ ಪತ್ರ ಬರೆದಿದ್ದಾರೆ.

ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊಸ ಸಮಿತಿ ಮಾಡಿರುವ ಅವಾಂತರಗಳು ಕ್ಷಣ ಕ್ಷಣಕ್ಕೂ ಬಹಿರಂಗವಾಗುತ್ತಿದ್ದು ಸರ್ಕಾರಕ್ಕೆ ಇಕ್ಕಟ್ಟು ತಂದಿವೆ. ಈ ನಡುವೆ ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನ ಮಾಡಲಾಗಿದೆ ಇದು ನಾಡಿನ ಆದಿವಾಸಿ, ಬುಡಕಟ್ಟು ಸಮುದಾಯವನ್ನು ನಿಂದಿಸಿದಂತಾಗಿದೆ ಎಂದು ಕರ್ನಾಟಕ ಬುಡಕಟ್ಟು ಪರಿಷತ್ತು ಅಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಹಾಗೂ ಕರ್ನಾಟಕ ಬುಡಕಟ್ಟು ಪರಿಷತ್ತು ಪದಾಧಿಕಾರಿಗಳಾದ ಡಾ.ರಮೇಶ್, ಸುರೇಶ್, ರಾಜು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

10 ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರೆ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿಯವರು ದೂರು ಸಲ್ಲಿಸಿದ್ದಾರೆ.

10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬುವುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದಿವಾಸಿಗಳ ಘನತೆ, ಸಂಸ್ಕೃತಿಯನ್ನು ಅಲ್ಲಗೆಳೆದು ನಮ್ಮನ್ನು ಮನುಷ್ಯರಂತೆ ಕಾಣದ ವಿಕೃತ ಮನೋದೋರಣೆಯ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಬಂಧಿಸಿ, ಕಾನೂನ ರೀತ್ಯಾ ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಗಿದ್ದು  ಅರಣ್ಯವಾಸಿ ಕ್ಷೇಮಾಭಿವೃದ್ಧಿ ಸಂಘದ ಹೋರಾಟಕ್ಕೆ ಕರ್ನಾಟಕ ಬುಡಕಟ್ಟು ಪರಿಷತ್ತು ಬೆಂಬಲಿಸಿದೆ.

 

 

 

 

Leave a Reply

Your email address will not be published. Required fields are marked *