ಕಳವಿಭಾಗಿ ಸಹಕಾರ ಸಂಘದಲ್ಲಿ “ಸೂಪರ್ ಮಾರ್ಕೆಟ್” ನಿರ್ಮಾಣ

Chitradurga
 ಕೃಷಿಪತ್ತಿನ ಸಹಕಾರ ಸಂಘದಿಂದ ಉತ್ತಮ ಕಾರ್ಯ: ಪೂರ್ಣಿಮಾ ಶ್ರೀನಿವಾಸ್
ಮಾಲತೇಶ್ ಅರಸ್
ಹಿರಿಯೂರು : ನಮ್ಮ ತಾಲ್ಲೂಕಿನಲ್ಲಿ ಸಹಕಾರಿ ಸಂಘಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯರಬಳ್ಳಿಯಲ್ಲಿನ ಕಳವಿಭಾಗಿ ಕೃಷಿ ಪತ್ತಿನ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘದಿಂದ “ಸೂಪರ್ ಮಾರ್ಕೆಟ್” ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಿಂದ 10 ಲಕ್ಷ ರೂಗಳ ಅನುದಾನ ನೀಡುವುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಘೋಷಿಸಿದರು.
ತಾಲ್ಲೂಕಿನ ಯರಬಳ್ಳಿ ಗ್ರಾಮದಲ್ಲಿ ರಾಜ್ಯ ಸಹಕಾರಿ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಚಿತ್ರದುರ್ಗ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚಿತ್ರದುರ್ಗ, ಕಳವಿಭಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ  69ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರಥಮ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರಿಗೆ ಸಹಕಾರಿ ತತ್ವಗಳಲ್ಲಿ ಭಾರಿ ನಂಬಿಕೆಯಿದ್ದು, ಈ ಸಹಕಾರಿ ತತ್ವಗಳ ಅಡಿಯಲ್ಲಿ ರಾಷ್ಟ್ರದ ಪ್ರಗತಿ ಕನಸು ಕಂಡಿದ್ದರು, ಭಾರತದ ಸರ್ವತೋಮುಖ ಪ್ರಗತಿಗೆ ಹಗಲು ರಾತ್ರಿ, ಶ್ರಮಿಸಿದ ನೆಹರುರವರು ಸಹಕಾರಿ ತತ್ವದ ಮೂಲಕ ಈ ರಾಷ್ಟ್ರದ ಭವಿಷ್ಯ ನಿರ್ಧರಿಸಬಹುದು ಎಂಬ ಆಶಯ ಇಟ್ಟುಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು ಎಂದು ಶಾಸಕಿ  ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ರಾಜ್ಯ ಸರ್ಕಾರ ನಿಂತು ಹೋಗಿದ್ದ ಯಶಸ್ವಿನಿ ಆರೋಗ್ಯ ರಕ್ಷಣೆ ವಿಮೆಯನ್ನು ಮರು ಜಾರಿಗೆ ತರುವ ಮೂಲಕ ಜನರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿದೆ, ಇದೊಂದು ಉತ್ತಮ ಯೋಜನೆಯಾಗಿದ್ದು, ಸಾರ್ವಜನಿಕರು ಸಹಕಾರ ಸಂಘಗಳ ಸದಸ್ಯರಾಗುವ ಮೂಲಕ ಈ ಯಶಸ್ವಿನಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಸಹಕಾರಿ ರತ್ನ ಪ್ರಶಸ್ತಿ ವಿಜೇತ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷರಾದ ಜಿಂಕಲ್ ಬಸವರಾಜು ಮಾತನಾಡಿ, ಸಹಕಾರಿ ಸಂಘಗಳು ವಿಶಾಲವಾದ ವ್ಯಾಪ್ತಿಪ್ರದೇಶವನ್ನು ಹೊಂದಿದ್ದು, ಈ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಎಲ್ಲಾ ರೀತಿಯ ಸಾಲಸೌಲಭ್ಯ ದೊರಕಲಿದ್ದು, ಪಶುಸಂಗೋಪನೆಗೆ ಸಹಾಯಧನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ರೈತರಿಗೆ ರಸಗೊಬ್ಬರಗಳ ರಿಯಾಯಿತಿ ಸೇರಿದಂತೆ ಎಲ್ಲಾರೀತಿಯ ಸೌಲಭ್ಯಗಳು ದೊರಕಲಿವೆ ಎಂದರು.
 ವಾಣಿವಿಲಾಸ ಪತ್ತಿನ ಸಹಕಾರ ಸಂಘದ ಆಲೂರು ಹನುಮಂತರಾಯಪ್ಪ ಮಾತನಾಡಿ, ರಾಜ್ಯಾದ್ಯಂತ ನವಂಬರ್ 14 ರಿಂದ 20 ರವರೆಗೆ ಈ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲೂ ಸಹ 7 ದಿನಗಳ ಕಾಲ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಈ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ, ಈ ಸಂದರ್ಭದಲ್ಲಿ ಸಹಕಾರ ಚಳುವಳಿ ನಡೆದುಬಂದ ದಾರಿ ಹಾಗೂ ಈ ಹಾದಿಯಲ್ಲಿನ ಸಾಧನೆ ಹಾಗೂ ವೈಫಲ್ಯಗಳನ್ನು ಕುರಿತು ಚಿಂತನ-ಮಂಥನ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಯರಬಳ್ಳಿ ರಂಗಸ್ವಾಮಿ ಹಾಗೂ ಜಿ.ತಿಪ್ಪೇಸ್ವಾಮಿ ಗೊಲ್ಲಹಳ್ಳಿ ಇವರುಗಳನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸನ್ಮಾನಿಸಿ ಗೌರವಿಸಿದರು. ವಾಣಿಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಶಿಮುಲ್ ನಿರ್ದೇಶಕರಾದ ವೀರಭದ್ರಬಾಬು, ಯಶವಂತ್ ರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್ ಇತರರು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕತೆಯನ್ನು ಕಳವಿಭಾಗಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ವಿ.ಪ್ರತಾಪಸಿಂಹ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್,  ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಧುಶ್ರೀನಿವಾಸ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಹೆಚ್.ಶಶಿಧರ್, ಹೆಚ್.ಶ್ರೀಧರ್,  ಗ್ರಾಪಂ ಅಧ್ಯಕ್ಷೆ  ರಮ್ಯರಾಜು, ರಾಜ್ಯ ಸಹಕಾರಿ ಮಹಾಮಂಡಳಿ ನಿರ್ದೇಶಕರಾದ ಎಸ್.ಜೆ.ಹನುಮಂತರಾಯ, ಶಿಮುಲ್ ನಿರ್ದೇಶಕರುಗಳಾದ ವೀರಭದ್ರಬಾಬು, ಯಶವಂತರಾಜು, ಹಿರಿಯ ಸಹಕಾರಿಗಳಾದ ವದ್ದೀಕೆರೆಕಾಂತರಾಜ್, ಪಿ.ಆರ್.ಸತೀಶಬಾಬು, ಪ್ರಸನ್ನ ಕುಮಾರ್, ರಾಮಕೃಷ್ಣ, ಗುರುಸ್ವಾಮಿ, ರಂಗಸ್ವಾಮಿ, ಕಾರ್ಯದರ್ಶಿ ಭೂತೇಶ್, ರಂಗಪ್ಪ, ರಾಮಚಂದ್ರಯ್ಯ, ರಾಜಣ್ಣ, ಸಿದ್ದೇಶ್,  ಇತರರು ಉಪಸ್ಥಿತರಿದ್ದರು.
ಪೊಟೋ
 ಯರಬಳ್ಳಿ ಗ್ರಾಮದಲ್ಲಿರುವ  ಕಳವಿಭಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  69ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿದರು.
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು.
ಪೊಟೋ

Leave a Reply

Your email address will not be published. Required fields are marked *