ಉಡುಪಿಯಲ್ಲಿ ಕನಕ ಗುರು ಪೀಠದ ಶಾಖಾಮಠ ನಿರ್ಮಾಣ ನಮ್ಮ ಗುರಿ

Districts Bureau Mangaluru State


ಮಂಗಳೂರು: ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವ ತೀರ್ಥ ಸ್ವಾಮೀಜಿ ಆಶೀರ್ವಾದದಿಂದ ಉಡುಪಿಯಲ್ಲಿ ಕನಕ ಗುರುಪೀಠದ ಶಾಖಾಮಠವನ್ನು ಮುಂದಿನ ವರ್ಷದಲ್ಲಿ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು
ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ‌ನಿರ್ದೇಶಕರಾದ ಶಿವಾನಂದ ಯರಝೇರಿ ಹೇಳಿದರು.

ಅವರು ಮಂಗಳೂರು ಶಾಂತಿ ನಗರದಲ್ಲಿನ ಕರಾವಳಿ ಕುರುಬರ ಸಂಘದಲ್ಲಿ “ಹಾಲುಮತ ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಎಸ್.ಟಿ ಮೀಸಲಾತಿ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಭಾಗದಲ್ಲಿ ಕುರುಬರು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ನಮಗೆ ಗುರಿಯೂ ಇದೆ ಗುರುವೂ ಇದ್ದಾರೆ. ಕಾಗಿನೆಲೆ ಶ್ರೀಗಳ ಆಸೆಯಂತೆ ಕನಕನ ಕಿಂಡಿ ಇರುವ ಉಡುಪಿಯ ಪುಣ್ಯಕ್ಷೇತ್ರದಲ್ಲಿ ಕನಕಗುರುಪೀಠ ಶಾಖಾಮಠ ಆರಂಭಿಸಬೇಕಿದೆ. ಮತ್ತು ಎಲ್ಲಾ ಸಮುದಾಯಕ್ಕೆ ಅನುಕೂಲವಾಗುವಂತ ಶೈಕ್ಷಣಿಕ ‌ಉನ್ನತಿ ಸಾಧಿಸಬೇಕಿದ್ದು ಕರಾವಳಿ ಕುರುಬರ ಸಂಘ, ಹಾಲುಮತ ಮಹಾಸಭಾ, ಕರ್ನಾಟಕ ಪ್ರದೇಶ ಕುರುಬರ ಸಂಘ, ಮಹಿಳಾ ಸಂಘಗಳು ಈ ಶ್ರೇಷ್ಠ ಕಾರ್ಯಕ್ಕೆ ಕೈ ಜೋಡಿಸಿ ಎಂದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕರಾವಳಿ ಕುರುಬರ ಹಾಸ್ಟೆಲ್ ಆರಂಭವಾಗಿದೆ, ಈಗಿನ ಸಂಘದ ಕಾರ್ಯಾಲಯ ಮಂಗಳೂರು ನಗರದಿಂದ ದೂರ ಇದ್ದು ನಗರದ ಮಧ್ಯೆ ಕುರುಬರ ಸಂಘದ ಕಚೇರಿ, ಹಾಸ್ಟೆಲ್ ಮಾಡುವ ಕನಸಿದೆ ಎಂದರು.

ಜಾನಪದ ಬುಡಕಟ್ಟು ಸಂಸ್ಕೃತಿ ಸಂಶೋಧಕ, ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿ ಕರಾವಳಿ ಕುರುಬರ ಸಂಘದಲ್ಲಿ ಕೇವಲ ಮಂಗಳೂರು ಕುರುಬರಿಲ್ಲ. ಬದಲಿಗೆ ಕರ್ನಾಟಕದ ಎಲ್ಲಾ ಜಿಲ್ಲೆಯ ಕುರುಬರು ಇಲ್ಲಿದ್ದಾರೆ. ಮಂಗಳೂರು ಕರಾವಳಿ ಆದರೂ ಇಲ್ಲಿ ಕರ್ನಾಟಕ ಕುರುಬರ ಶಕ್ತಿ ಅಪಾರ ಇದೆ. ಹಾಲುಮತ ಕುರುಬರು ಮೂಲತಃ ಬುಡಕಟ್ಟು ಸಮುದಾಯದವಾಗಿದ್ದು ನೆಲಮೂಲ ಸಂಸ್ಕೃತಿ ಯನ್ನು ಹೊಂದಿದೆ. ಈಗಾಗಲೇ ಎಸ್.ಟಿ ಮೀಸಲಾತಿಗೆ ಕುಲ ಶಾಸ್ತ್ರ ಅಧ್ಯಯನ ನಡೆಯುತ್ತಿದ್ದು ಎಲ್ಲರೂ ಕೈ ಜೋಡಿಸಿ ಸಹಕರಿಸಿ ಮತ್ತು ಬೆಂಬಲಿಸುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಹಾಲುಮತ ಕುರುಬರು ಕ್ಷತ್ರಿಯರು, ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕಬುಕ್ಕರು, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕವಿರತ್ನ ಕಾಳಿದಾಸ, ವೀರಪಾಂಡ್ಯ ಕಟ್ಟಬೊಮ್ಮನ್, ಚಂದ್ರಗುಪ್ತಮೌರ್ಯ, ಅಶೋಕ ಚಕ್ರವರ್ತಿಯಂತ ರಾಜ ಮಹಾರಾಜರಿಗೆ ಹಾಗೂ ಧೀಮಂತ ಹೋರಾಟಗಾರರಿಗೆ ಜನ್ಮ ನೀಡಿದ ಸಮುದಾಯವಾಗಿದ್ದು, ಪ್ರಸ್ತುತ ಕುರುಬರೆಲ್ಲ ಹಾಲುಮತ ಸಂಸ್ಕೃತಿ, ಪರಂಪರೆ, ಚರಿತ್ರೆ, ಇತಿಹಾಸವನ್ನು ಅಧ್ಯಯನ ಮಾಡಿ, ಸಂಶೋಧಕರು ಬರೆದ ಕೃತಿಗಳನ್ನು ಓದಿ ಎಂದು ಸಲಹೆ ನೀಡಿದರು.

ಕರಾವಳಿ ಕುರುಬರ ಸಂಘದ ಮಾಜಿ ಅಧ್ಯಕ್ಷರೂ, ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರಾದ ರವಿಕುಮಾರ್ ಮಾತನಾಡಿ ಸಿದ್ದರಾಮಯ್ಯ ಅವರು ಇಲ್ಲಿಗೆ ಐವತ್ತು ಲಕ್ಷ ಅನುದಾನ ನೀಡಿ ಬಡ ವಿದ್ಯಾರ್ಥಿಗಳಿಗಾಗಿ ನಿಲಯ ಕಟ್ಟಿಸಲು ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಥಳವನ್ನು, ಅನುದಾನವನ್ನು ನೀಡಬೇಕು. ಸಮುದಾಯದ ಬಂಧುಗಳು ಒಮ್ಮೆ ಭೇಟಿ ‌ನೀಡಿ ಮನವಿ ಮಾಡೋಣ ಎಂದರು

ಹಾಲುಮತ ಮಹಾಸಭಾ ಮಂಗಳೂರು ಜಿಲ್ಲಾಧ್ಯಕ್ಷರಾದ ರಂಗಣ್ಣ, ಹಾಸ್ಟೆಲ್ ವಾರ್ಡನ್ ಮಹೇಶ್,ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷರಾದ
ಬಿ.ಆರ್.ಗೌಡರ್ ಉಪೇಂದ್ರ ಹಾಗೂ ಇತರರು ಇದ್ದರು.

ಪೋಟೋ
ಮಂಗಳೂರಿನ ಕರಾವಳಿ ಕುರುಬರ ಸಂಘದಲ್ಲಿ ಜಾನಪದ ಬುಡಕಟ್ಟು ಸಂಸ್ಕೃತಿ ಸಂಶೋಧಕ, ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ‌ನಿರ್ದೇಶಕರಾದ ಶಿವಾನಂದ ಯರಝೇರಿ ಅಭಿನಂದಿಸಿದರು.

Leave a Reply

Your email address will not be published. Required fields are marked *