ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮ.
ಮಾಲತೇಶ್ ಅರಸ್
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಅಕ್ರಮ ಮದ್ಯಮಾರಾಟ ಹೆಚ್ಚಳ, ಶೌಚಾಲಯಕ್ಕೆ ತೆರಳುವ ಬಾಲೆಯರ ಮೇಲೆ ಅತ್ಯಾಚಾರ, ಮೊಬೈಲ್ ಗಳಿಂದ ಸೈಬರ್ ಕ್ರೈಮ್ ಗಳು ಮಿತಿಮೀರುತ್ತಿದ್ದು ಪೋಷಕರಿಗೆ ಎಚ್ಚರಿಕೆ. ಕಾಲೇಜು ಕ್ಯಾಂಪಸ್ ನಲ್ಲಿ ಎಗ್ಗಿಲ್ಲದೆ ಡಗ್ಸ್ ಚಲಾವಣೆ. ದೇಶದ ಪವಿತ್ರ ಗ್ರಂಥ ಸಂವಿಧಾನದ ಆಶಯಕ್ಕೆ ಧಕ್ಕೆ . ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುವ ಯುವಕರ ಬಗ್ಗೆ ಕಟ್ಟೆಚ್ಚರ. ಅಪಾಯಕಾರಿ ಹಂತದಲ್ಲಿ ಮಕ್ಕಳು.
ಹೌದು. ಇಂತಹ ಹತ್ತಾರು ಪ್ರಶ್ನೆಗಳು ಗಣ್ಯರಿಂದಲೇ ಹೊರ ಬಿದ್ದವು. ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು, ಐಕ್ಯೂಎಸಿ ಮಹಿಳಾ ಸಬಲೀಕರಣ ಘಟಕ, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅನೇಕ ವಿಷಯಗಳ ಬಗ್ಗೆ ಅವಲೋಕನ ಮಾಡಲಾಯಿತು.

ಇಂದು ಸೈಬರ್ ಕ್ರೈಮ್ ಹೆಚ್ಚಾಗುತ್ತಿದ್ದು, ಕೀಚಕನಿಗಿಂತ ಹೆಚ್ಚು ಕೆಟ್ಟ ಮಟ್ಟದಲ್ಲಿ ಇಂದು ಜನ ನಡೆದುಕೊಳ್ಳುತ್ತಿದ್ದಾರೆ. ಅಪರಾಧಗಳನ್ನು ಮಾಡಬೇಕೆಂದು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಲವಾರು ಮುಖಗಳಲ್ಲಿ ಸೈಬರ್ ಕ್ರೈಮ್ ನಡೆಯುತ್ತಿದ್ದ ಮಹಿಳೆಯರೇ ಹೆಚ್ಚು ಬಲಿಯಾಗುತ್ತಿದ್ದಾರೆ, ವಿದ್ಯಾರ್ಥಿಗಳು ಇದಕ್ಕೆ ನಿತ್ಯವೂ ಸಿಲುಕುತ್ತಿದ್ದಾರೆ ಎಂದು
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿತೇಂದ್ರನಾಥ್ ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿ ಅಪರಾಧಗಳು ನಡೆಯಲು ಮುಖ್ಯ ಕಾರಣ ಮಾನವನ ಅತಿಯಾಸೆ. ಮನುಷ್ಯ ಮನುಷ್ಯನನ್ನಾಗಿ ನೋಡಬೇಕಿದೆ. ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದೆ. ಮಹಿಳೆಯರ ನೆರವಿಗೆ ಅನೇಕ ಕಾನೂನುಗಳಿವೆ. ನಮ್ಮಲ್ಲಿ ಎಷ್ಟೇ ಕಾನೂನುಗಳಿದ್ದಾಗ್ಯೂ ಸಮಾಜದಲ್ಲಿ ಅಪರಾಧಗಳು ವಿಜೃಂಭಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.
ಸಮಾಜದಲ್ಲಿ ಎರಡು ರೀತಿಯ ಕ್ರೈಮ್ ಗಳಿವೆ. ತನ್ನ ತಪ್ಪಿನಿಂದ ಸಿಕ್ಕಿಕೊಳ್ಳುವುದು ಮತ್ತು ತಪ್ಪಿಲ್ಲದೆ ಶಿಕ್ಷೆಗೊಳಗಾಗುವುದು. ಹೆಣ್ಣುಮಕ್ಕಳ ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಹೆದರಿಸುವುದು, ಇದು ನೈತಿಕ ಅಧಃಪತನವನ್ನು ತೋರಿಸುತ್ತದೆ. ಕೆಲವೆಡೆ ಶೌಚಕ್ಕೆ ಹೋದವರ ಮೇಲೆ ಅತ್ಯಾಚಾರವೆಸಗುವ ಕೀಚಕ ಪ್ರವೃತ್ತಿಗಳು ನಡೆಯುತ್ತಿವೆ. ಹಾಗಾಗಿ ಹೆಣ್ಣುಮಕ್ಕಳು ಸದಾ ಜಾಗೃತಿಯಿಂದ ಇರಬೇಕು ಎಂದು ತಿಳಿಹೇಳಿದರು.

ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ.ಶಿವುಯಾದವ್ ಮಾತನಾಡಿ, ಅತಿಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಪೊಲೀಸ್ ಠಾಣೆಗಳಲ್ಲಿ ಆಗುತ್ತಿವೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಚಾಕು, ಚೂರಿಗಿಂತಲೂ ಅಪಾಯಕಾರಿ ನಮ್ಮಲ್ಲಿರುವ ಮೊಬೈಲ್‌ಗಳು. ನಾವು ತಪ್ಪು ಮಾಡಿದಾಗ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್ ಗಳ ನಡುವೆ ಮನುಷ್ಯನ ಆಸೆ, ನಂಬಿಕೆ, ದುರಾಸೆ ಎಲ್ಲವೂ ಸೇರಿ ಇಂದು ಅನೇಕ ಅಪರಾಧ ಕೃತ್ಯಗಳು ನಡೆಯುತ್ತಿವೆ. ಚಿತ್ರದುರ್ಗದಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ದಂಧೆಗಳು ಹೆಚ್ಚಾಗುತ್ತಿದ್ದು ಪೊಲಿಸ್ ಇಲಾಖೆ ಹೆಚ್ಚು ಗಮನಹರಿಸಬೇಕು. ಯುವತಿಯರು ಮೊಬೈಲ್ ಮೂಲಕ ಹಾಳಾಗುತ್ತಿದ್ದು ಚಿತ್ರದುರ್ಗದ ಯುವಕನೊಬ್ಬ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಇದೀಗ ಪ್ರಕರಣ ದಾಖಲಾಗಿದೆ ಎಂದು ಸೈಬರ್ ಕ್ರೈಮ್ ಬಗ್ಗೆ ವಿವರಿಸಿದರು.

ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ರಾಜ್ಯಾಧ್ಯಕ್ಷರಾದ ಜಾನ್ ಸಾಮ್ಯುವೆಲ್ ಕಿಮ್ ಮಾತನಾಡಿ, ಯುವತಿಯರು, ವಿದ್ಯಾರ್ಥಿಗಳು, ಮಹಿಳೆಯರು ಮೊಬೈಲ್ ಗೀಳಿಗೆ ಬಿದ್ದು ಹಾಳಾಗುತ್ತಿದ್ದಾರೆ. ಮೊಬೈಲ್ ಬಳಕೆಯಿಂದಾಗಿ ಪ್ರೀತಿ ಪ್ರೇಮ ಕಾಮಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಕ್ರೈಮ್ ಮತ್ತು ಸೈಬರ್ ಕ್ರೈಮ್ ಗಳಾಗಲು ಮಹಿಳೆಯರೇ ಹೆಚ್ಚುಕಾರಣರಾಗುತ್ತಿದ್ದಾರೆ. ಅಪರಾಧದ ಪ್ರಕರಣಗಳಲ್ಲಿ ನಾವು ಸಿಲುಕುವ ಮುನ್ನ ಎಚ್ಚರವಹಿಸಬೇಕು ಎಂದರು.
ಸೈಬರ್ ಕ್ರೈಮ್ ವಿಭಾಗದ ಮಲ್ಲಿಕಾರ್ಜುನ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನಾವೇ ತೊಂದರೆಗಳನ್ನು ಆಹ್ವಾನಿಸಿಕೊಳ್ಳುತ್ತೇವೆ. ದುರಾಸೆ, ನಂಬಿಕೆ ಮೊದಲಾದವುಗಳಿಂದ ಅಪರಾಧಕ್ಕೆ ಒಳಗಾಗುತ್ತೇವೆ. ಕೆಲವರು ಲಿಂಕ್ ಮೂಲಕ ನಂಬಿಸಿ ನಿಧಾನವಾಗಿ ತಮ್ಮ ಜಾಲದೊಳಗೆ ಸಿಕ್ಕಿಹಾಕಿಸಿಕೊಳ್ಳುತ್ತಾರೆ. ಕೆಲವು ಫೋಟೋಗಳನ್ನು ನಮ್ಮಿಂದಲೇ ಪಡೆದು ಬ್ಲಾಕ್‌ಮೇಲ್ ಮಾಡುವ ತಂತ್ರ ಉಪಯೋಗಿಸುತ್ತಾರೆ. ಯಾರೂ ಸಹ ಇಂತಹವುಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದರು.
ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಮಾತನಾಡಿದರು. ಶ್ವೇತ, ಶ್ಯಾಮ್ ಕಿಮ್ ಜೆ ವೇದಿಕೆಯಲ್ಲಿದ್ದರು. ಎನ್. ಚಲುವರಾಜು ಸ್ವಾಗತಿಸಿದರು. ನೂರೈನ್ ಫಾತಿಮಾ ನಿರೂಪಿಸಿದರು.
ಒಟ್ಟಾರೆ ಚಿತ್ರದುರ್ಗದಲ್ಲಿ ನಡೆದ ಈ ಕಾರ್ಯಕ್ರಮ ಸೈಬರ್ ಕ್ರೈಮ್ ಒಳಗಿನ ಅನೇಕ ವಿಚಾರಗಳನ್ನು ಹೊರಹಾಕಿದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿನಿಯರಿಗೆ ಮಹಿಳೆಯರಿಗೆ ಇದು ಅತ್ಯಂತ ಭರವಸೆ ಮೂಡಿಸಿತು.
ಮಾಲತೇಶ್ ಅರಸ್. ವಕೀಲರು. ಮತ್ತು
ನ್ಯೂಸ್ ಎಡಿಟರ್. ಸುದ್ದಿವಾಣಿ.. ಈ ನಗರವಾಣಿ