ಪ್ರಿಯ ಪತ್ರಕರ್ತರೇ ನಿಮ್ಮ ಕುಟುಂಬದ ಸುರಕ್ಷತೆಗಾಗಿ ದಯವಿಟ್ಟು ಇದನ್ನು ಓದಿ…

Bangalore Editorial

 

ಶರತ್ ಎಂ.ಎಸ್ . ಬೆಂಗಳೂರು

ಪತ್ರಕರ್ತರಾದ ನಾವು ಊರಿನವರೆಲ್ಲರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸದಾ ಕಾತುರರಾಗಿರುತ್ತೇವೆ. ಆದರೆ ನಮ್ಮ ಕುಟುಂಬ, ನಮ್ಮ ಸುರಕ್ಷತೆ, ನಮ್ಮ ಭವಿಷ್ಯ ಅಂತ ಬಂದಾಗ ಅದರ ಬಗ್ಗೆ ನಾವು ಯೋಚಿಸುವುದೇ ಇಲ್ಲ.

ಒಂದು ರೀತಿ ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಮನಸ್ಥಿತಿ ಬಹುತೇಕ ವೃತ್ತಿಪರ ಪತ್ರಕರ್ತರದ್ದು. ಯಾಕೆ ಈ ವಿಷಯವನ್ನು ಪ್ರಸ್ತಾಪಿಸಿದೆ ಅಂದ್ರೆ ಅನೇಕ ಪತ್ರಕರ್ತ ಮಿತ್ರರು ತಮ್ಮ ಕುಟುಂಬದ ಸುರಕ್ಷತೆಗಾಗಿ ಏನನ್ನೂ ಮಾಡಿರುವುದಿಲ್ಲ. ಕನಿಷ್ಠ ಒಂದು ಆರೋಗ್ಯ ವಿಮೆ ಮತ್ತು ಟರ್ಮ್ ಇನ್ಶೂರೆನ್ಸ್ ಕೂಡ ತೆಗೆದುಕೊಂಡಿರುವುದಿಲ್ಲ.

ಕೆಲಸ ಮಾಡುವಾಗ ಅನಾರೋಗ್ಯಕ್ಕೆ ತುತ್ತಾದರೆ ಸಂಸ್ಥೆಯ ಶಿಫಾರಸಿನ ಮೇಲೆ, ಬೀಟ್ ರಿಪೋರ್ಟ್ ಟರ್ ಗಳ ಕಾಂಟ್ಯಾಕ್ಟ್ ನ ಆಧಾರದಲ್ಲಿ ಒಂದಷ್ಟು ವೈದ್ಯಕೀಯ ಚಿಕಿತ್ಸೆ ಸಿಗಬಹುದೆನೋ. ಆದರೆ ಕೆಲಸ ತ್ಯಜಿಸಿದ ಮೇಲೆ ಅದೂ ಸಿಗಲ್ಲ. ಹೀಗೆ ಸೂತ್ರವಿಲ್ಲದ ,ಸುರಕ್ಷತೆಯಿಲ್ಲದ ಬದುಕು ಬಹುತೇಕ ಕನ್ನಡ ಪತ್ರಕರ್ತರದ್ದು. ಇನ್ನೂ ಯಾರಾದರೂ ಅಕಾಲಿಕ ಸಾವನ್ನಪ್ಪಿದರೆ ಸರ್ಕಾರದಿಂದ ಪರಿಹಾರ ರೂಪದಲ್ಲಿ ಪತ್ರಕರ್ತನ ಕುಟುಂಬಕ್ಕೆ ಹೆಚ್ಚಂದ್ರೆ 5 ಲಕ್ಷ ಪರಿಹಾರ ಸಿಗಬಹುದೆನೋ.

ಆ ಐದು ಲಕ್ಷದಲ್ಲಿ ಕುಟುಂಬ ಏನು ಮಾಡಲು ಸಾಧ್ಯ? ಮಕ್ಕಳ ಶಿಕ್ಷಣ, ಪತ್ನಿಯ ವಯೋ ಸಹಜ ಆರೋಗ್ಯ ಸಮಸ್ಯೆ ಇವೆಲ್ಲವನ್ನೂ ನಿಭಾಯಿಸಬಹುದೇ? ಮನೆ ಕಟ್ಟಿಸಲು, ಕಾರ್ ಖರೀದಿಗಾಗಿ ಸಾಲ ಮಾಡಿದ್ದರೆ ಅದನ್ನು ತೀರಿಸುವುದು ಹೇಗೆ? ಇದ್ಯಾವುದಕ್ಕೂ ಬಹುಪಾಲು ಪತ್ರಕರ್ತ ಮಿತ್ರರು ಉತ್ತರ ಕಂಡುಕೊಂಡಿಲ್ಲ. ಕೆಲವರು ಎಲ್ ಐಸಿ ಇನ್ಶೂರೆನ್ಸ್ ಪಾಲಿಸಿ ಮಾಡಿಸಿದ್ದೇವೆ ಅಂತ ಅಂದುಕೊಂಡಿರುತ್ತಾರೆ.

ಆದರೆ ಎಲ್ ಐಸಿಯ ಎಂಡೋಮೆಂಟ್ ಪಾಲಿಸಿ ಅಥವಾ ಮನಿ ಬ್ಯಾಕ್ ಪಾಲಿಸಿಯಿಂದ ಹೆಚ್ಚು ಉಪಯೋಗವಿಲ್ಲ. ನನ್ನದೊಂದು ಎಲ್ ಐಸಿ ಎಂಡೋಮೆಂಟ್ ಪಾಲಿಸಿ ಇದೆ. ವರ್ಷಕ್ಕೆ ಅದಕ್ಕೆ 38 ಸಾವಿರ ಪ್ರೀಮಿಯಂ ಕಟ್ಟುತ್ತೇನೆ. ಆದರೆ ಇಷ್ಟು ದೊಡ್ಡ ಮೊತ್ತದ ಪ್ರೀಮಿಯಂ ಕಟ್ಟಿದರೂ ಸಿಗುವ ವಿಮೆಯ ರಕ್ಷಣೆ ಎಷ್ಟು ಗೊತ್ತಾ? ಬರೀ 10 ಲಕ್ಷ. ಇವತ್ತಿನ ದುಬಾರಿ ದುನಿಯಾದಲ್ಲಿ 10 ಲಕ್ಷ ಇನ್ಶೂರೆನ್ಸ್ ಕವರೇಜ್ ಹಣ ತೆಗೆದುಕೊಂಡು ಏನು ಮಾಡಲು ಸಾಧ್ಯ? ನಾವಿದನ್ನೂ ಯೋಚಿಸುವುದೇ ಇಲ್ಲ. ಏಜೆಂಟ್ ಹೇಳಿದರು ಎನ್ನುವ ಕಾರಣಕ್ಕೆ ಒಂದು ಹಳೆ ಮಾದರಿಯ ಇನ್ಶೂರೆನ್ಸ್ ಮಾಡಿಸಿ ಸುಮ್ಮನಾಗಿಬಿಡುತ್ತೇವೆ.

ಪತ್ರಕರ್ತರು ತಮ್ಮ ಕುಟುಂಬದ ರಕ್ಷಣೆಗೆ ಏನು ಮಾಡಬೇಕು? ಜೀವನದಲ್ಲಿ ಎದುರಾಗುವ ಅನಿಶ್ಚಿತ ಸಂದರ್ಭಗಳಿಗೆ ನಾವು ಸಿದ್ಧರಾಗಿರಬೇಕು ಎನ್ನುವುದು ಹಣಕಾಸು ನಿರ್ವಹಣೆಯ ಮೊದಲನೆಯ ಪಾಠ. ಇದನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತರೆಲ್ಲರೂ ಕಡ್ಡಾಯವಾಗಿ ಆರೋಗ್ಯ ವಿಮೆ ಮತ್ತು ಟರ್ಮ ಲೈಫ್ ಇನ್ಶೂರೆನ್ಸ್ ( ಅವಧಿ ವಿಮೆ) ಮಾಡಿಸಿಕೊಳ್ಳುವುದು ಒಳಿತು.

ಒಮ್ಮೆ ಯೋಚಿಸಿ ನೋಡಿ ಅನಾರೋಗ್ಯಕ್ಕೆ ತುತ್ತಾದಾಗ ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲಾ ಆಸ್ಪತ್ರಗೆ ಕಟ್ಟುವ ಬದಲು ಉಳಿತಾಯ ಮಾಡಿದ ಒಂದಿಷ್ಟು ಹಣವನ್ನು ಆರೋಗ್ಯ ವಿಮೆ ಪ್ರೀಮಿಯಂಗೆ ಮೀಸಲಿಟ್ಟು ನೆಮ್ಮದಿಯಾಗಿರುವುದು ಸರಿಯಲ್ಲವೇ? ಹೌದು ವರ್ಷಕ್ಕೆ 10 ರಿಂದ 15 ಸಾವಿರ ಮೀಸಲಿಟ್ಟರೆ ಸಾಕು ಇಡೀ ಕುಟುಂಬಕ್ಕೆ ಆರೋಗ್ಯ ವಿಮೆ ಪಡೆದುಕೊಳ್ಳಬಹುದು. ಇನ್ನೂ ಟರ್ಮ್ ಲೈಫ್ ಇನ್ಶೂರೆನ್ಸ್ ಅಂದ್ರೆ ಏನು ಅಂತ ನೀವೆಲ್ಲಾ ಕೇಳಬಹುದು. ಇದು ನೀವು ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬಕ್ಕೆ ನೀಡುವ ಆರ್ಥಿಕ ರಕ್ಷಣೆ. ನೀವು ಪ್ರತಿ ತಿಂಗಳು 30 ಸಾವಿರ, 50 ಸಾವಿರ, 1 ಲಕ್ಷ ದುಡಿಯುತ್ತಿರುತ್ತೀರಿ. ನೀವು ಆಕಸ್ಮಿಕವಾಗಿ ಸಾವಿಗೆ ತುತ್ತಾದರೆ ನಿಮ್ಮ ಕುಟುಂಬಕ್ಕೆ ಹಣಕಾಸಿನ ಅಗತ್ಯಗಳನ್ನು ಒದಗಿಸಿಕೊಡುವವರು ಯಾರು? ಇದಕ್ಕೆ ಉತ್ತರವೇ ಟರ್ಮ್ ಲೈಫ್ ಇನ್ಶೂರೆನ್ಸ್.

ಕುಟುಂಬವೊಂದಕ್ಕೆ ಅದರ ಯಜಮಾನನ ಸಾವಿನಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಟರ್ಮ್ ಲೈಫ್ ಇನ್ಶೂರೆನ್ಸ್ ಭರಿಸುತ್ತದೆ. ಟರ್ಮ್ ಲೈಫ್ ಇನ್ಶೂರೆನ್ಸ್ ನ ಪ್ರೀಮಿಯಂ ಕೂಡ ಬಹಳ ಕಡಿಮೆ. ಸುಮಾರು 30 ವರ್ಷದ ವ್ಯಕ್ತಿ 1 ಕೋಟಿ ರೂಪಾಯಿಯ ಟರ್ಮ್ ಇನ್ಶೂರೆನ್ಸ್ ಕವರೇಜ್ ಪಡೆಯಲು ವಾರ್ಷಿಕ 12 ರಿಂದ 13 ಸಾವಿರ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಒಮ್ಮೆ ಇನ್ಶೂರೆನ್ಸ್ ಮಾಡಿಸಿದರೆ ಪ್ರೀಮಿಯಂ ಮೊತ್ತ ಬದಲಾಗುವುದಿಲ್ಲ. ನಾವು ಎಷ್ಟು ವರ್ಷಕ್ಕೆ ಟರ್ಮ್ ಇನ್ಶೂರೆನ್ಸ್ ಮಾಡಿಸಿರುತ್ತೆವೋ ಅಷ್ಟು ವರ್ಷ ನಿಗದಿತ ಪ್ರೀಮಿಯಂ ಕಟ್ಟುತ್ತಾ ಹೋದರೆ ಸಾಕು.

ಒಂದೊಮ್ಮೆ ವ್ಯಕ್ತಿಯ ಜೀವಕ್ಕೆ ತೊಂದರೆ ಆದರೆ ಆತನ ಕುಟುಂಬಕ್ಕೆ 1 ಕೋಟಿ ಸಿಗುತ್ತದೆ. ಕೇವಲ ಒಂದು ಕೋಟಿಗಷ್ಟೇ ಇನ್ಸೂರೆನ್ಸ್ ಸಿಗುತ್ತದೆ ಎಂದಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ 50 ಲಕ್ಷ, 1 ಕೋಟಿ, 2 ಕೋಟಿ , 3 ಕೋಟಿಗೂ ಟರ್ಮ್ ಲೈಫ್ ಇನ್ಶೂರೆನ್ಸ್ ಪಡೆಯಬಹುದು. ಆದರೆ ಕವರೇಜ್ ಮೊತ್ತಕ್ಕೆ ತಕ್ಕಂತೆ ಪ್ರೀಮಿಯಂ ಬದಲಾಗುತ್ತದೆ. ಟರ್ಮ್ ಇನ್ಶೂರೆನ್ ಅತ್ಯಂತ ಅಗ್ಗದ ಸುರಕ್ಷತ ಜೀವ ವಿಮೆ. ನಾನು ಹೇಳುವ ಮಾತಿನ ಬಗ್ಗೆ ಅನುಮಾನವಿದ್ದರೆ ಗೂಗಲ್ ಮಾಡಿ ನೋಡಿ, ಇಲ್ಲ ತಜ್ಞರನ್ನು ಕೇಳಿ, ಇಲ್ಲ ಇದರಿಂದ ಪ್ರಯೋಜನ ಪಡೆದವರನ್ನು ವಿಚಾರಿಸಿ, ಆಗ ನಿಮಗೆ ಈ ಇನ್ಶೂರೆನ್ಸ್ ನ ಮಹತ್ವ ತಿಳಿಯುತ್ತದೆ.

ನಾನು ಪತ್ರಿಕೋದ್ಯಮದಲ್ಲಿ ಇರುವವರೆಗೂ ನನಗೆ ಟರ್ಮ್ ಇನ್ಶೂರೆನ್ಸ್ ನ ಮಹತ್ವ ತಿಳಿದಿರಲಿಲ್ಲ, ಆದರೆ ಇಂಡಿಯನ್ ಮನಿ ಡಾಟ್ ಕಾಂ ಗೆ ಸೇರಿದ ಮೇಲೆ ಟರ್ಮ್ ಲೈಫ್ ಇನ್ಶೂರೆನ್ಸ್ ಮಾಡಿಸಿಕೊಂಡಿದ್ದೇನೆ. ಈ ವಿಮೆ ಇರುವುದರಿಂದ ಕುಟುಂಬದ ಸುರಕ್ಷತೆಯ ಬಗ್ಗೆ ಒಂದು ನೆಮ್ಮದಿಯ ಭಾವವಿದೆ. ಮತ್ತೊಂದು ಸ್ಪಷ್ಟನೆ, ಇಂಡಿಯನ್ ಮನಿ ಡಾಟ್ ಕಾಂ ಯಾವುದೇ ವಿಮೆಯನ್ನು ಮಾರಾಟ ಮಾಡುವುದಿಲ್ಲ. ನಾವು ಯಾವುದೇ ಬ್ರಾಂಡ್ ನ ಪ್ರಮೋಟರ್ ಕೂಡ ಅಲ್ಲ. ನಿಮಗೆ ಯಾವ ಕಂಪನಿ ಉತ್ತಮವೆನಿಸುತ್ತದೋ ಆ ಕಂಪನಿಯಿಂದ ಟರ್ಮ್ ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳಿ. ಇಂಡಿಯನ್ ಮನಿಯ ಫ್ರೀಡಂ ಆಪ್ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿ ಅಂದ್ರೆ ಎನ್ ಎಸ್ ಡಿಸಿಯ ನಾಲೆಡ್ಜ್ ಪಾರ್ಟರ್ ಕೂಡ ಆಗಿದ್ದು ಹಣಕಾಸು ಶಿಕ್ಷಣ ಜಾಗೃತಿ ಮೂಡಿಸುತ್ತಿದೆ. ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದ್ರೆ ಪತ್ರಕರ್ತ ಮಿತ್ರರೊಂದಿಗೆ, ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಬರೀ ಪತ್ರಕರ್ತರಷ್ಟೇ ಅಲ್ಲ ಪ್ರತಿಯೊಂದು ಕುಟುಂಬಕ್ಕೂ ಟರ್ಮ್ ಇನ್ಶೂರೆನ್ಸ್ ಅತ್ಯಗತ್ಯ ಹಾಗಾಗಿ ಈ ವಿಷಯ ಹೆಚ್ಚೆಚ್ಚು ಜನರಿಗೆ ತಲುಪುವಂತೆ ಮಾಡಿ.

 

ಬರಹ: ಶರತ್ ಎಂ.ಎಸ್. ಪತ್ರಕರ್ತರು. ಬೆಂಗಳೂರು

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

 

ಮಾಲತೇಶ್ ಅರಸ್ ಹರ್ತಿಕೋಟೆ. ಸಂಪಾದಕರು ಸುದ್ದಿವಾಣಿ ಡಿಜಿಟಲ್ ಮೀಡಿಯಾ. ಈ ನಗರವಾಣಿ ದಿನಪತ್ರಿಕೆ.

 

Leave a Reply

Your email address will not be published. Required fields are marked *